ಕಳಸ ಲೈವ್ ವರದಿ
ಕಳಸ ಇನಾಂ ಭೂಮಿಗೆ ಬದಲಿ ಜಮೀನು ನೀಡುವ ಬಗ್ಗೆ ಸರ್ವೋಚ್ಚ ನ್ಯಾಯಲಯಕ್ಕೆ ಸರ್ಕಾರದ ವತಿಯಿಂದ ಪ್ರಮಾಣ ಪತ್ರ ಸಲ್ಲಿಸುವುದಾಗಿ ಕಂದಾಉ ಸಚಿನ ಕೃಷ್ಣೇ ಭೈರೇಗೌಡ ತಿಳಿಸಿದ್ದಾರೆ.
ಬುಧವಾರ ಕರ್ನಾಟಕ ವಿಧಾನ ಪರಿಷತ್ತಿನ ಅಧಿವೇಶನದ ಶೂನ್ಯ ವೇಳೆಯಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಕಳಸ ಇನಾಂ ಭೂಮಿ ವಿಚಾರವಾಗಿ ಸರ್ಕಾರವನ್ನು ಒತ್ತಾಯಿಸಿದ ಅವರು,
ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲ್ಲೂಕಿನ ಪುರಾತನ ಶ್ರೀ ಕಲಶೇಶ್ವರ ಸ್ವಾಮಿ ದೇವಸ್ಥಾನಕ್ಕೆ 1512ರಲ್ಲಿ ಕಾರ್ಕಳ ಭೈರವರಸ ರಾಜರು ಮಾವಿನಕೆರೆ, ತಲಗೋಡು, ತೋಟದೂರು ಗ್ರಾಮಗಳಲ್ಲಿನ ಪೂರ್ಣ ಜಮೀನುಗಳನ್ನು ದಾನ ನೀಡಿದ್ದು, ದಾನ ನೀಡುವಾಗ ವಿಧಿಸಿದ್ದ ಷರತ್ತುಗಳಂತೆ ಈ ಜಮೀನುಗಳಿಂದ ಬರುವ ಆದಾಯದಿಂದ ಶ್ರೀ ದೇವರ ಪೂಜೆ, ಉತ್ಸವ, ಹೋಮ-ಹವನ, ರಥೋತ್ಸವ, ಗಿರಿಜಾ ಕಲ್ಯಾಣ ಮುಂತಾದ ಸೇವೆಗಳನ್ನು ನಡೆಸಿಕೊಂಡು ಬರಲಾಗಿದೆ. ಆದರೆ, ನಂತರದ ದಿನಗಳಲ್ಲಿ ಅರಣ್ಯ ಇಲಾಖೆಯವರು ದೇವಸ್ಥಾನಕ್ಕೆ ಸೇರಿದ 6777 ಎಕರೆ ಪ್ರದೇಶ ಅರಣ್ಯ ಇಲಾಖೆಗೆ ಸೇರಿದ್ದೆಂದು ಮಹಾರಾಜರು ಘೋಷಿಸಿದ್ದಾರೆಂದು ಹೇಳಲಾದ ಗೆಜೆಟನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು, ನ್ಯಾಯಾಲಯ ಗೆಜೆಟ್ ಅನುಸಾರ ಅರಣ್ಯ ಭೂಮಿ ಎಂದು 2012 ರಲ್ಲಿ ತೀರ್ಪು ನೀಡಿರುತ್ತದೆ. ನಂತರ ಉಚ್ಚ ನ್ಯಾಯಾಲಯ ಸಹ 2014 ರಲ್ಲಿ ಈ ಆದೇಶವನ್ನು ಎತ್ತಿ ಹಿಡಿದಿದೆ. ಉಚ್ಚ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸರ್ವೋಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ. (ಎನ್.ಪಿ. ಸುಂಗಧಿನಿ ಮತ್ತು ಇತರೆರ ಹೆಸರಿನಲ್ಲಿರುವ ಪ್ರಕರಣ ಸಂಖ್ಯೆ:ಎಸ್.ಎಲ್.ಪಿ (ಸಿಎಲ್) : 28571-28595/2014). ಶ್ರೀ ಕಲಶೇಶ್ವರ ದೇವಸ್ಥಾನಕ್ಕೆ ಸೇರಿದ ಈ ಭೂಮಿಯಲ್ಲಿ ಹಲವಾರು ವರ್ಷಗಳ ಹಿಂದೆಯೇ 330 ಕುಟುಂಬಗಳಿಗೆ ಅಂದಾಜು 750 ಎಕರೆ ಜಮೀನು ಮಂಜೂರು ಮಾಡಲಾಗಿದ್ದು, ಅಂದಾಜು 650 ಕುಟುಂಬಗಳು 1900 ಎಕರೆ ಒತ್ತುವರಿ ಸಾಗುವಳಿ ಮಾಡಿ
ಮನೆ-ಮಠ ಮಾಡಿಕೊಂಡಿರುವುದು ಜೀವನ ಸಾಗಿಸುತ್ತಿದ್ದಾರೆ. ಅಲ್ಲದೇ, ಈ ಜಮೀನಿನಲ್ಲಿ ಕುದುರೆಮುಖ ಸಂಸ್ಥೆಗೆ 300 ಎಕರೆ ಹಂಚಿಕೆ ಮಾಡಲಾಗಿದೆ. ಇವರೆಲ್ಲರ ಹಿತದೃಷ್ಠಿಯಿಂದ ಹಾಗೂ ಇವರನ್ನು ಒಕ್ಕಲೆಬ್ಬಿಸುವುದನ್ನು ತಡೆಯಲು ಹಿಂದಿನ ಸರ್ಕಾರದಲ್ಲಿ ಮಾನ್ಯ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಹಾಗೂ ಅರಣ್ಯ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆದ ತೀರ್ಮಾನದಂತೆ ಅರಣ್ಯ ಮತ್ತು ಕಂದಾಯ ಇಲಾಖೆಯ ಜಂಟಿ ಸರ್ವೇ ನಡೆಸಿ, ಸದರಿ ಅರಣ್ಯ ಜಮೀನಿಗೆ ಬದಲಾಗಿ ಪರ್ಯಾಯ ಜಮೀನು ನೀಡಲು ತೀರ್ಮಾನವಾಗಿದ್ದು, ಅದರಂತೆ ಬದಲಿ ಜಮೀನು ನೀಡಲು ಒಪ್ಪಿರುವುದಾಗಿ ಸರ್ವೋಚ್ಚ ನ್ಯಾಯಾಲಯಕ್ಕೆ ತುರ್ತಾಗಿ ಪ್ರಮಾಣ ಪತ್ರ ಸಲ್ಲಿಸುವಂತೆ ಶ್ರೀ ಸಿ.ಟಿ. ರವಿ ರವರು ಒತ್ತಾಯಿಸಿದ್ದರು.
ಸದರಿ ಪ್ರಸ್ತಾಪಕ್ಕೆ ಉತ್ತರ ನೀಡುತ್ತಾ. “ಬದಲಿ ಜಮೀನು ನೀಡುವ ಬಗ್ಗೆ ಮಾನ್ಯ ಸರ್ವೋಚ್ಛ ನ್ಯಾಯಾಲಯಕ್ಕೆ ಸರ್ಕಾರದ ವತಿಯಿಂದ ಪ್ರಮಾಣ ಪತ್ರ ಸಲ್ಲಿಸುವುದಕ್ಕೆ ತಕ್ಷಣ ಕ್ರಮ ತೆಗೆದುಕೊಳ್ಳುತ್ತೇವೆ” ಎಂದು ಮಾನ್ಯ ಕಂದಾಯ ಸಚಿವರಾದ ಶ್ರೀ ಕೃಷ್ಣಭೈರೇಗೌಡ ರವರು ತಿಳಿಸಿರುತ್ತಾರೆ.
ಕಳಸ ಇನಾಂ ಭೂಮಿ ವಿಚಾರವಾಗಿ ದ್ವನಿ ಎತ್ತಿದ ವಿಧಾನ ಪರಿಷತ್ ಸದಸ್ಯರಾದ ಸಿ.ಟಿ.ರವಿಯವರಿಗೂ ಹಾಗೂ ಸ್ಪಂದಿಸಿದ ಕಂದಾಯ ಸಚಿವರಾದ ಕೃಷ್ಣೇಭೈರೇ ಗೌಡರಿಗೆ, ಇನಾಂ ಭೂಮಿ ವಿಚಾರವಾಗಿ ಈ ಹಿಂದಿನಿಂದಲೂ ಸಹಕರಿಸಿದ ಮೂಡಿಗೆರೆ ಶಾಸಕರಾದ ಶ್ರಿಮತಿ ನಯನಾ ಮೋಟಮ್ಮ, ವಿಧಾನ ಪರಿಷತ್ ಸದಸ್ಯರಾದ ಎಂ.ಕೆ.ಪ್ರಾಣೇಶ್ ಎಸ್.ಎಲ್. ಭೋಜೇ ಗೌಡ್ರು, ಲೋಕಸಭಾ ಸದಸ್ಯರಾರ ಹೆಚ್.ಡಿ. ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ, ಕೋಟ ಶ್ರೀನಿವಾಸ ಪೂಜಾರಿ ಇವರಿಗೆ ಕಲಶೇಶ್ವರ ಇನಾಂ ಭೂಮಿ ಹೋರಾಟ ಸಮಿತಿ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಸರ್ವ ಸದಸ್ಯರು, ಹಾಗೂ ಇನಾಂ ಭೂಮಿ ಸಮಸ್ಯೆ ಎದುರಿಸುತ್ತಿರುವ ಕುಟುಂಬಗಳು ಅಭಿನಂದನೆ ಸಲ್ಲಿಸಿದ್ದಾರೆ.
ಈ ಬಗ್ಗೆ ಸಿ.ಟಿ.ರವಿಯವರು ಹೊರನಾಡು ದೇವಸ್ಥಾನಕ್ಕೆ ಬೇಟಿ ನೀಡಿದ ಸಂದರ್ಭದಲ್ಲಿ ಜಿ.ಭೀಮೇಶ್ವರ ಜೋಷಿಯವರು ಇನಾಂ ಭೂಮಿ ವಿಚಾರವಾಗಿ ಸಿ.ಟಿ.ರವಿಯವರಿಗೆ ಮನವಿಯನ್ನು ಸಲ್ಲಿಸಿದ್ದರು.