ಕಳಸ ಲೈವ್ ವರದಿ
ಕಳಸ ತಾಲೂಕಿನಾಧ್ಯಂತ ಸ್ವಲ್ಪ ಮಟ್ಟಿಗೆ ಮಳೆಯ ಅಬ್ಬರ ಕಡಿಮೆಯಾದರೂ ಕೂಡ ಮಳೆಯ ಹಾನಿ ಮಾತ್ರ ಮುಂದುವರೆದಿದೆ.
ಕಳಸ-ಹೊರನಾಡು ಮುಖ್ಯ ರಸ್ತೆಯ ವೆಂಕಟರಮಣ ದೇವಸ್ಥಾನ ಬಳಿ ರಸ್ತೆಯ ಪಕ್ಕದ ದರೆ ಕುಸಿದಿದೆ. ಕಳಸ ಪಂಚಾಯಿತಿ ವ್ಯಾಪ್ತಿಯ ಕಲ್ಲಾನೆ ಎಂಬಲ್ಲಿ ಭಾಸ್ಕರ ಪೂಜಾರಿ ಎಂಬುವವರ ಮನೆ ಪಕ್ಕದಲ್ಲಿ ದರೆ ಕುಸಿದಿದೆ ಪಕ್ಕದಲ್ಲಿಯೇ ಭದ್ರಾ ನದಿ ಇದ್ದು ಮನೆ ಅಪಾಯದ ಸ್ಥಿತಿಯಲ್ಲಿದೆ. ಬಾಳೆಹೊಳೆ ಹಿರಿಯ ಪ್ರಾಥಮಿಕ ಶಾಲೆಯ ಹಿಂಬದಿಯ ಗುಡ್ಡ ಕುಸಿದು ಬೀಳುತ್ತಿದ್ದು, ಶಾಲೆಗೆ ಅಪಾಯ ಎದುರಾಗುವ ಮುನ್ಸೂಚನೆ ಇದೆ. ಹೊರನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಟೆಕೊಳ್ಳಲು ರಾಮು ಎಂಬುವವರ ಮನೆ ಕುಸಿದಿದೆ, ಅದೇ ಪಂಚಾಯತಿ ವ್ಯಾಪ್ತಿಯ ಗೊರಸಿನ ತೋಟ ಸರಸ್ವತಿ ಎಂಬುವವರ ಮನೆ ಪಕ್ಕದ ದರೆ ಕುಸಿದು ಮನೆಗೆ ಹಾನಿಯಾಗಿದೆ. ಇಡಕಣಿ ಪಂಚಾಯಿತಿ ವ್ಯಾಪ್ತಿಯ ಹಿರೇಬೈಲು-ಕಂಕೊಡು ಎಂಬಲ್ಲಿ ದರೆ ರಸ್ತೆಗೆ ಕುಸಿದು ಈ ರಸ್ತೆಯಲ್ಲಿ ಸಂಚರಿಸುವ ಗ್ರಾಮಸ್ಥರಿಗೆ ತೊಂದರೆಯಾಗಿದೆ. ಅದೇ ಪಂಚಾಯಿತಿ ವ್ಯಾಪ್ತಿಯ ಕೋಟೆಮಕ್ಕಿ ಅನಿತ ಎಂಬುವವರ ಮನೆ ಮೇಲೆ ಮರ ಬಿದ್ದು ಮನೆಗೆ ಹಾನಿಯಾಗಿದೆ. ಕೋಟೆಮಕ್ಕಿ-ತೋಟದಮನೆಗೆ ಹೋಗುವ ಸಂಪರ್ಕ ರಸ್ತೆ ಸಂಪೂರ್ಣ ಕೊಚ್ಚಿಹೋಗಿ ಸುಮಾರು 12 ಮನೆಯವರಿಗೆ ತೊಂದರೆ ಉಂಟಾಗಿದೆ.ಮರಸಣಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಡೂರು ರಸ್ತೆ ಮೇಲೆ ದರೆ ಕುಸಿದಿದ್ದು, ತೆರವು ಮಾಡಲಾಗಿದೆ.