ಕಳಸ ಲೈವ್ ವರದಿ
ಕಳಸ ತಾಲೂಕಿನಾಧ್ಯಂತ ಸೋಮವಾರದಿಂದ ಮಳೆಯ ಅಬ್ಬರ ಹೆಚ್ಚಾಗಿದ್ದು ಪರಿಣಾಮ ಕೆಲವೆಡೆ ಭೂಕುಸಿತವಾಗಿದ್ದು, ಜನ ತೊಂದರೆ ಅನುಭವಿಸಿದ್ದಾರೆ.
ಕಳಸದಲ್ಲಿ ಸೋಮವಾರ ಬೆಳಿಗ್ಗೆ 8 ಗಂಟೆಯಿಂದ ಮಂಗಳವಾರ ಬೆಳಿಗ್ಗೆ 8 ಗಂಟೆಯವರೆಗೆ 110.6 ಮಿ.ಮಿ ಮಳೆಯಾಗಿದೆ.ಸೋಮವಾರ ಸಂಜೆಯಿಂದ ಮಳೆಯ ಪ್ರಮಾಣ ಹೆಚ್ಚಾಗಿದ್ದು, ಪರಿಣಾಮ ಕಳಸ-ಹೊರನಾಡು ಮಧ್ಯೆ ಭದ್ರಾ ನದಿಯ ಹೆಬ್ಬೋಳೆ ಸೇತುವೆ ಸೋಮವಾರ ರಾತ್ರಿ ಕೆಲ ಕಾಲ ಮುಳುಗಿತ್ತು. ಹೊರನಾಡಿಗೆ ಹೋಗುವ ಪ್ರವಾಸಿಗರು ಮತ್ತು ಸ್ಥಳೀಯರು ಬದಲಿ ಮಾರ್ಗ ಹಳುವಳ್ಳಿ ಮಾರ್ಗವನ್ನು ಬಳಸಿಕೊಂಡರು.
ಇಡಕಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೇಬೈಲ್ ಹೆಮ್ಮಕ್ಕಿ ರಸ್ತೆಯ ಕಂಕೋಡ್ ಹತ್ತಿರ ರಸ್ತೆಗೆ ಧರೆ ಕುಸಿದಿದೆ. ಮರಸಣಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೈದಾಡಿಯಿಂದ ಮೇಲ್ಗುಳ್ಳಿಗೆ ತೆರಳುವ ರಸ್ತೆಯ ಬದಿ ಮರ ಹಾಗೂ ದರೆ ಕುಸಿದಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಗ್ರಾಮ ಪಂಚಾಯಿತಿ ವತಿಯಿಂದ ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಹೊರನಾಡು ಗ್ರಾಮದ ಮುಂಡುಗದ ಮನೆ ರಸ್ತೆಯ ಬದಿ ಭೂಕುಸಿತಗೊಂಡು ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಹೊರನಾಡು ಪಂಚಾಯಿತಿ ವತಿಯಿಂದ ತೆರವು ಮಾಡಲಾಯಿತು.
ಮಳೆಯ ಪರಿಣಾಮ ಮುಂಜಾಗೃತಾ ಕ್ರಮವಾಗಿ ತಾಲೂಕಿನ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ರಜೆಯನ್ನು ನೀಡಲಾಗಿತ್ತು.ಆದರೆ ಬೆಳಿಗ್ಗೆಯಿಂದ ಮಳೆಯ ಅಬ್ಬರ ಕಡಿಮೆಯಾಗಿತ್ತು.