ಕಳಸ ಲೈವ್
ಬರಹ: ಪೂರ್ಣಿಮಾ ಹೆಬ್ಬಾರ್,ಹೊರನಾಡು
ಸೋಲೋ ಟ್ರಾವೆಲಿಂಗ್ ಒಂದು ಅನ್ವೇಷಣ ಮಾರ್ಗ. ಸೋಲೋ ಅಂದ ಕೂಡಲೇ ಎಲ್ಲರ ಕಡೆಯಿಂದಲೂ ಬುದ್ದಿವಾದಗಳ ಮಹಾಪೂರವೇ ಹರಿಯುತ್ತದೆ. ಅದರಲ್ಲೂ ಹೆಣ್ಣುಮಕ್ಕಳಿಗಂತೂ ಹೇಳುವುದೇ ಬೇಡ, ಎಲ್ಲಿಲ್ಲದ ಅಡ್ಡಿಗಳು. ಒಬ್ಬಂಟಿ ತಿರುಗಾಟ ಎಂದರೆ ಅಬ್ಬೆಪಾರಿ ಜೀವನ ಅಂತಾರೆ ಆದರೆ ನಾನು ಕಂಡು ಕೊಂಡ ಸತ್ಯವೇ ಬೇರೆ, ಸಮಾಜ ಯಾವುದಕ್ಕೆಲ್ಲ ಹೆದರುತ್ತದೆಯೋ ಅದರ ಹಿಂದೆಯೇ ಹೋಗೋ ಜಾಯಮಾನ ನನ್ನದು. ಏಕಾಂಗಿ ತಿರುಗಾಟದಲ್ಲಿ ಸ್ವಲ್ಪ ಎಚ್ಚರಿಕೆ ವಹಿಸಬೇಕು ಸತ್ಯ ಆದರೆ ಅದು ತುಂಬಾ ಅಪಾಯಕಾರಿ ಎಂದು ಹೇಳುವುದು ಸುಳ್ಳು. ಏಕಾಂಗಿಯಾಗಿ ಏಕಾಂತತೆಯನ್ನು ಅನುಭವಿಸಲು ಲವ್ ಫೇಲ್ಯೂರ್ ಅಥವಾ ಜೀವನದಲ್ಲಿ ಆಗಬಾರದ್ದಾಗಿ ಡಿಪ್ರೆಷನ್ಗೆ ಹೋದ್ರೆ ಮಾತ್ರ ಅಂತೇನಿಲ್ಲ, ನಮ್ಮ ಜೊತೆ ನಾವು ಇರೋದಕ್ಕೆ ಪುರುಸೊತ್ತಿದ್ರೆ ಸಾಕು. ಅಹಂ ಬ್ರಹ್ಮಸ್ಮಿ ಅಂತ ದೊಡ್ಡೋರು ಹೇಳ್ತಾರೆ ಈ ಮಾತು ಅನುಭವಕ್ಕೆ ಬರೋಕೆ ನಮ್ಮನ್ನ ನಾವು ಅರಿತುಕೊಳ್ಳುವುದು ಬಹಳ ಮುಖ್ಯ. ನಾವೇನು ಅನ್ನುವುದು ನಮಗೆ ಅರ್ಥ ಆದ್ರೆ ಜೀವನದಲ್ಲಾಗುವ ಅರ್ಧ ತೊಂದರೆಗಳು ನಿವಾರಣೆಯಾದಂತೆ. ಈ ಓಡುತ್ತಿರೋ ಜಗತ್ತಿನಲ್ಲಿ ನಾವೂ ಎಡಬಿಡದೆ ಓಡ್ತಾಯಿದ್ದೇವೆ. ಸ್ವಲ್ಪ ಸುಧಾರಿಸ್ಕೊಂಡು ನಮ್ಮ ಮನಸಿನ ಮಾತನ್ನು ನಾವು ಕೇಳುವುದಕ್ಕೆ ಈ ಸೋಲೋ ಟ್ರಾವೆಲಿಂಗ್ ಅನ್ನೋದು ಒಂದು ಒಳ್ಳೆಯ ಉಪಾಯ. ಆ ಪಯಣದತುಂಬೆಲ್ಲಾ ನಮ್ಮ ಮೇಲೆ ನಾವೇ ನಿರ್ಬರರಾಗಿರುತ್ತೇವೆ. ಹೇಳೋರ್ ಯಾರು? ಕೇಳೋರ್ ಯಾರು?. ಹೋದ ಜಾಗಗಳನ್ನೆಲ್ಲ ಅನ್ವೇಷಸುತ್ತಾ-ಅನ್ವೇಷಸುತ್ತಾ ನಮ್ಮನ್ನು ನಾವು ಅನ್ವೇಷಿಸಿಕೊಳ್ಳುವ ಒಂದೊಳ್ಳೆ ಸಮಯವದು.
ಕನಸು,
ಎಲ್ಲರಲ್ಲೂ ಒಂದಲ್ಲಾ ಒಂದು ಕನಸುಗಳು ಇದ್ದೇ ಇರುತ್ತವೆ. ಆದರೆ ಕನಸುಗಳನ್ನು ಕನಸಾಗೆ ಉಳಿಸದೇ ನನಸಾಗಿಸಿಕೊಳ್ಳುವವರು ಬೆರಳೆಣಿಕೆಯ ಜನಗಳμÉ್ಟೀ. ಸೋಲೋ ಟ್ರಾವೆಲಿಂಗ್ ಎನ್ನುವುದು ನನ್ನ ಬಹುದೊಡ್ಡ ಕನಸು, ಈ ಕನಸು ನನ್ನಲ್ಲಿ ಮೂಡುವುದಕ್ಕೆ ಮುಖ್ಯ ಕಾರಣ ನನ್ನ ಅಕ್ಕ. ನಾನು ಚಿಕ್ಕವಳಿದ್ದಾಗ ನನ್ನ ಅಕ್ಕ ಧೈರ್ಯವಾಗಿ ಸೋಲೋ ಟ್ರಾವೆಲಿಂಗ್ ಅನ್ನು ಮಾಡುತ್ತಿದ್ದಳು. ಅವಳನ್ನು ನೋಡಿದಾಗಲೆಲ್ಲ ನನ್ನ ಮನಸಿನಲ್ಲಿ ಮೂಡುತ್ತಿದ್ದದ್ದು ಒಂದೇ ಪ್ರಶ್ನೆ ‘ನಾನು ಯಾವಾಗ ಹೀಗೆ ಒಬ್ಬಂಟಿಯಾಗಿ ಪ್ರಯಾಣ ಮಾಡುವುದು’ ಎಂದು. ಸಮಯ ಕಳೆದಂತೆ ನನ್ನ ಕನಸಿನತ್ತ ಸಾಗುವ ನನ್ನ ಬಯಕೆಯು ಹೆಚ್ಚಾಗುತ್ತಿತ್ತು. ಕೊನೆಗೂ ಆ ಕ್ಷಣ ಬಂದೇ ಬಿಟ್ಟಿತು. ನನ್ನ ಕನಸನ್ನು ನನಸಾಗಿಸುವಲ್ಲಿ ಮೊದಲ ಹೆಜ್ಜೆಯನಿಟ್ಟೆ. ಮನೆಯವರ ಸಮ್ಮತಿಯೂ ದೊರೆಯಿತು. ನನ್ನ ಮೊದಲ ಏಕಾಂಗಿ ಪ್ರಯಾಣ ಆರಂಭಿಸುವ ಸಂತಸದಲ್ಲಿದ್ದ ನನಗೆ ಎಲ್ಲಿಂದ ಪ್ರಯಾಣ ಶುರುಮಾಡಬೇಕೆಂಬ ಪ್ರಶ್ನೆ ಎದುರಾಯಿತು. ಆಗ ಎಲ್ಲೋ ದೂರದ ದೇಶಗಳನ್ನು ನೋಡುವ ಬದಲು ನಮ್ಮ ಕರ್ನಾಟಕದಿಂದಲೇ ಪ್ರಯಾಣ ಆರಂಭಿಸುವ ನಿರ್ಧಾರ ಮಾಡಿ ನಂತರ ಪುಣ್ಯ ಸ್ಥಳಗಳಾದ ಬೇಲೂರು, ಹಳೇಬೀಡು ಹಾಗೂ ಶ್ರವಣಬೆಳಗೊಳವನ್ನು ಆರಿಸಿಕೊಂಡೆ. ಸುಮಾರು ಮೂರು ದಿನಗಳ ಕಾಲ ಸುತ್ತಾಟವನ್ನು ಮಾಡಿದೆ. ಅದರ ಅನುಭವವನ್ನು ಪದಗಳಲ್ಲಿ ವರ್ಣಿಸಲು ಕಷ್ಟವಾಗಿದೆ. ಆ ಮೂರು ದಿನಗಳು ನನ್ನನ್ನು ನಿಯಂತ್ರಿಸುವವರಾಗಲಿ, ಪ್ರಶ್ನಿಸುವವರಾಗಲಿ, ಅಡ್ಡಿಪಡಿಸುವವರಾಗಲಿ ಯಾರೂ ಇರಲಿಲ್ಲ. ನನ್ನೊಂದಿಗೆ ನಾನು ಆನಂದದ ಕ್ಷಣಗಳನ್ನು ಕಳೆಯುತ್ತಾ ನಾನೇನು ಎಂಬುದನ್ನು ಅರಿತುಕೊಂಡೆ. ಕೊನೆಗೂ ನನ್ನ ಕನಸುಗಳನ್ನು ನನಸು ಮಾಡುವ ಹಾದಿಯಲ್ಲಿ ಮೊದಲ ಹೆಜ್ಜೆಯನ್ನಿಟ್ಟ ಖುಷಿ ನನಗಿದೆ. ಹೀಗೆ ನನ್ನ ಸಂಚಾರವನ್ನು ಮುಂದುವರೆಸಿ ನನ್ನಲ್ಲಿರುವ ನನ್ನನ್ನು ಅರಿತುಕೊಳ್ಳುವ ಆಸೆ ನನ್ನದು.
Related Stories
September 6, 2024