ಕಳಸ ಲೈವ್ ವರದಿ
ಕಳಸ ತಾಲ್ಲೂಕು ಘೋಷಣೆ ಆಗಿ 3 ವರ್ಷ ಕಳೆದರೂ ಕಳಸದಲ್ಲಿ ಅಭಿವೃದ್ಧಿ ಕಾರ್ಯಗಳು ಆಗಿಲ್ಲ.ತಾಲ್ಲೂಕಿನ ಎಲ್ಲ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಜುಲೈ 5ರ ಒಳಗಾಗಿ ಕಳಸ ಬಂದ್ ಹಾಗೂ ಬೃಹತ್ ಪ್ರತಿಭಟನೆ ಮಾಡಲು ತೀರ್ಮಾನಿಸಲಾಗಿದೆ.
ಈ ಬಗ್ಗೆ ಭಾನುವಾರ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡಿದ್ದು, ಅದಕ್ಕಾಗಿ ಕಳಸ ತಾಲ್ಲೂಕು ಸಮಗ್ರ ಅಭಿವೃದ್ಧಿ ಸಮಿತಿಯನ್ನು ರಚಿಸಲಾಗಿದ್ದು, ಸಮಿತಿಯ ಅಧ್ಯಕ್ಷರಾಗಿ ಜೆಡಿಎಸ್ ಮುಖಂಡ ಜಿ.ಕೆ.ಮಂಜಪ್ಪಯ್ಯ ಆವರನ್ನು ಆಯ್ಕೆ ಮಾಡಲಾಗಿದ್ದು, ಸಮಿತಿಯ ಉಪಾಧ್ಯಕ್ಷರಾಗಿ ಬಿಜೆಪಿ ಮುಖಂಡರಾದ ಎಂ.ಎಶೇಷಗಿರಿ ನೇಮಕಗೊಂಡಿದ್ದಾರೆ.
ಈ ಬಗ್ಗೆ ಜೆಡಿಎಸ್ ಮುಖಂಡ ಜಿ.ಕೆ.ಮಂಜಪ್ಪಯ್ಯ ಮಾತನಾಡಿ 2021ರಲ್ಲಿ ಕಳಸ ತಾಲ್ಲೂಕು ಅಂತಿಮ ಅಧಿಸೂಚನೆ ಆದ ನಂತರವೂ ಕಳಸದಲ್ಲಿ ತಾಲ್ಲೂಕು ಕೇಂದ್ರಕ್ಕೆ ಸಂಬಂಧಿಸಿದ ಕೆಲಸಗಳು ಆಗಿಲ್ಲ. 3 ವರ್ಷ ಕಾಲಹರಣ ಮಾಡಲಾಗಿದೆ. 2 ವರ್ಷದಲ್ಲಿ 7 ತಹಶೀಲ್ದಾರ್ ಬಂದು ಹೋಗಿದ್ದಾರೆ. ವಿವಿಧ ಇಲಾಖೆಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯಾರಂಭಿಸಬಹುದು. ಈ ಬಗ್ಗೆ ಸರ್ಕಾರದ ಗಮನ ಸೆಳೆಯಲು ಕಳಸ ಬಂದ್ ಮಾಡಿ ಪ್ರತಿಭಟನಾ ಮೆರವಣಿಗೆ ನಡೆಸಲು ಯೋಚಿಸಲಾಗುತ್ತಿದೆ ಎಂದರು
ಸಿಪಿಐ ಮುಖಂಡ ಗೊಪಾಲ ಶೆಟ್ಟಿ, ಕಳಸ ತಾಲ್ಲೂಕು ಕೇಂದ್ರವಾಗಲು ಎಲ್ಲ ರಾಜಕೀಯ ಪಕ್ಷಗಳು ಹೋರಾಟ ಮಾಡಿವೆ. ಅಂತಿಮ ಅಧಿ ಸೂಚನೆ ಹೊರಡಿಸಲು ಕೂಡ ಎಲ್ಲಾ ಪಕ್ಷಗಳು ಹೋರಾಟ ಮಾಡಿವೆ.ಈ ಗ ಪೂರ್ಣ ಪ್ರಮಾಣದ ಕಚೇರಿಗಳನ್ನು ತೆರಯಲು ಕೂಡ ಎಲ್ಲಾ ಪಕ್ಷಗಳು ಸೇರಿ ಹೋರಾಟ ಮಾಡುವ ಅನಿವಾರ್ಯತೆ ಎದುರಾಗಿದೆ.ಹಿಂದೆ ಇದ್ದ ಹಾಗೂ ಹಾಲಿ ಇರುವ ಶಾಸಕರು ಸರಿಯಾಗಿ ಕೆಲಸ ಮಾಡದೆ ಹಿನ್ನಲೆಯಲ್ಲಿ ಕಳಸದಲ್ಲಿ ಬ್ರಷ್ಟಾಚಾರ ರಹಿತ ಅಭಿವೃದ್ಧಿಗಾಗಿ ಪ್ರತಿಭಟನೆಯ ಅವಶ್ಯಕತೆ ಇದೆ ಎಂದರು.
ಬಿಜೆಪಿ ಮುಖಂಡ ಎಂ.ಎ.ಶೇಷಗಿರಿ ಮಾತನಾಡಿ, ಕಳಸ ತಾಲ್ಲೂಕು ಕೇಂದ್ರವಾದಾಗ ನಾವೆಲ್ಲ ತುಂಬಾ ಸಂತಸಪಟ್ಟಿದ್ದೆವು.ಆದರೆ ಇದೀಗ ಜನ ಬೀದಿ ಬೀದಿಯಲ್ಲಿ ಬಯ್ಯುತ್ತಿರುವುದನ್ನು ನಾವು ಕೇಳಬೇಕಾಗಿದೆ.ಕಳಸ ತಾಲ್ಲೂಕು ಯಾವ ಅಧಿಕಾರಿಗಳಿಗೂ ಜನಪ್ರತಿನಿಧಿಗಳಿಗೂ ಅಗತ್ಯವಿಲ್ಲದ ತಾಲ್ಲೂಕು ಆಗಿದೆ ಆದ್ದರಿಂದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನು ಎಚ್ಚರಿಸಲು ಹೋರಾಟ ಅನಿವಾರ್ಯವಾಗಿದೆ ಎಂದರು.
ಕಳಸ ಜೆಡಿಎಸ್ ಅಧ್ಯಕ್ಷ ಸಂತೋಷ್ ಹಿನಾರಿ ಮಾತನಾಡಿ, ಇಲ್ಲಿಯ ಎಲ್ಲಾ ಇಲಾಖೆಯ ಅಧಿಕಾರಿಗಳು ಕಾಂಗ್ರೆಸ್ ಪಕ್ಷದ ನಾಯಕರ ಕೈಗೊಂಬೆಗಳಂತೆ ಕೆಲಸ ಮಾಡುತ್ತಿದ್ದಾರೆ.ಸಾಮಾನ್ಯ ಜನರ ಯಾವುದೇ ಕೆಲಸಗಳು ಆಗುತ್ತಿಲ್ಲ. ಶಾಸಕರು ಕಳಸದಲ್ಲಿ ಈವರೆಗೂ ಜನಸಂಪರ್ಕ ಸಭೆ ನಡೆಸಿಲ್ಲ, ಜನರ ಅಹವಾಲು ಆಲಿಸಿಲ್ಲ.ಕಂದಾಯ ಇಲಾಖೆಯು ಕೂಡ ಸಂಪೂರ್ಣವಾಗಿ ನಿಷ್ಕ್ರಿಯವಾಗಿದೆ ಎಂದರು.
ಕಳಸ ತಾಲ್ಲೂಕು ಅಭಿವೃದ್ಧಿ ಸಮಿತಿಗೆ ಪ್ರಧಾನ ಕಾರ್ಯದರ್ಶಿಯಾಗಿ ಕಚಗಾನೆ ರಂಗನಾಥ್, ಸಂಚಾಲಕರಾಗಿ ಸಂತೋಷ್ ಹಿನಾರಿ, ಜ್ವಾಲನಯ್ಯ, ಗೋಪಾಲ ಶೆಟ್ಟಿ, ಲಕ್ಷ್ಮಣಾಚಾರ್, ಆಶಾಲತಾ ಜೈನ್, ಸುಜಯಾ ಸದಾನಂದ ನಾಗೇಶ್ ಮತ್ತಿತರರನ್ನು ಆರಿಸಲಾಯಿತು