ಕಳಸ ಲೈವ್ ವರದಿ
‘ಆಧುನಿಕ ಜೀವನ ಶೈಲಿಯ ಪರಿಣಾಮದಿಂದಾಗಿ ಯುವಜನತೆ ಖಿನ್ನತೆ ಮೊದಲಾದ ಮಾನಸಿಕ ಸಮಸ್ಯೆಗಳಿಗೆ ಈಡಾಗುತ್ತಿದ್ದು ಯೋಗಾಭ್ಯಾಸವನ್ನು ಜೀವನದ ಭಾಗವಾಗಿ ರೂಢಿಸಿಕೊಳ್ಳುವುದರಿಂದ ನೆಮ್ಮದಿಯ ಬದುಕು ನಡೆಸಲು ಸಾಧ್ಯ’ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ರಾಜೇಂದ್ರ ಹೆಬ್ಬಾರ್ ಹಿತ್ಲುಮಕ್ಕಿ ಅಭಿಪ್ರಾಯ ವ್ಯಕ್ತಪಡಿಸಿದರು.
ಶುಕ್ರವಾರ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಅಂತರಾಷ್ಟ್ರೀಯ ಯೋಗ ದಿನಾಚರಣೆ’ಯ ಭಾಗವಾಗಿ ಹಮ್ಮಿಕೊಂಡಿದ್ದ ಯೋಗ ಹಾಗೂ ಧ್ಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಮಾನಸಿಕ ಉದ್ವೇಗ, ಆತಂಕಗಳಿಗೆ ಯೋಗ ಪರಿಣಾಮಕಾರಿಯಾದ ಚಿಕಿತ್ಸೆಯಾಗಿ ಕೆಲಸ ಮಾಡುವುದಲ್ಲದೇ ದೈಹಿಕ ಆರೋಗ್ಯಕ್ಕೂ ಇದು ಪ್ರಯೋಜನಕಾರಿ. ನಟ ಡಾ.ರಾಜ್ಕುಮಾರ್ರಂತಹ ಖ್ಯಾತ ನಾಮರೂ ಕೂಡಾ ಯೋಗಾಭ್ಯಾಸ ಮಾಡುತ್ತಿದ್ದರು. ಇದು ಯುವಜನತೆಗೆ ಪ್ರೇರಣೆಯಾಗಬೇಕು’ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಯೋಗ ಪ್ರದರ್ಶನವನ್ನು ಯೋಗ ಗುರು ಪ್ರೇಮ್ಕುಮಾರ್ ವೈ ಇವರ ಮಾರ್ಗದರ್ಶನದಲ್ಲಿ ನಡೆಸಿಕೊಟ್ಟರು.ನಂತರ ಸಾಮೂಹಿಕ ಧ್ಯಾನ ನಡೆಯಿತು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಫಣೀಶ್ ಹಾಗೂ ಪೋಷಕರ ಸಮಿತಿ ಅಧ್ಯಕ್ಷ ಅಜಿತ್ಪ್ರಸಾದ್ ಜೈನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾಲೇಜಿನ ಯುವ ರೆಡ್ ಕ್ರಾಸ್ ಘಟಕ, ಕ್ರೀಡಾ ವಿಭಾಗ, ರೋವರ್ಸ್ ಹಾಗೂ ರೇಂಜರ್ಸ್ ಘಟಕ, ಹಾಗೂ ಐಕ್ಯೂಎಸಿ ಸಂಯುಕ್ತವಾಗಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಸಮಿತಿಗಳ ಸಂಚಾಲಕರಾದ ಸೋಮಶೇಖರ ಸಿ.ಎನ್, ಸಂತೋಷ್ಕೆ.ಬಿ, ನಿವೇದಿತಾಎನ್, ಹಾಗೂ ಆದಿತ್ಯ ಅಡಿಗ ಎ.ಜಿ. ಪಾಲ್ಗೊಂಡಿದ್ದರು. ಕಾಲೇಜಿನ ಪ್ರಾಂಶುಪಾಲ ವಿನಯಕುಮಾರ ಶೆಟ್ಟಿಎಸ್. ಅಧ್ಯಕ್ಷತೆ ವಹಿಸಿದ್ದರು. ನಿರೂಪಣೆಯನ್ನು ಕು.ಪ್ರಗತಿ, ಸ್ವಾಗತವನ್ನು ಕು.ಹರ್ಷಿತಾ ಹಾಗೂ ಕು. ಅಂಕಿತಾ ವಂದನಾರ್ಪಣೆ ನೆರವೇರಿಸಿದರು.ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.