ಕಳಸ ಲೈವ್ ವರದಿ
ಕಳಸ ತಾಲೂಕಿನ ತೋಟದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಗ್ಗನಳ್ಳ ಗ್ರಾಮದ ಗಿರಿಜಾ ಎಂಬುವವರ ಮನೆಯ ಮೇಲೆ ಮರ ಬಿದ್ದು ನಾಲ್ವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಮನೆ ಜಖಂ ಗೊಂಡಿದೆ.
ಶುಕ್ರವಾರದ ಬೆಳಗ್ಗಿನ 4 ಗಂಟೆಯ ಸಮಯದಲ್ಲಿ ಮನೆಯವರೆಲ್ಲ ಗಾಡ ನಿದ್ರೆಯಲ್ಲಿದ್ದ ಸಂದರ್ಭದಲ್ಲಿ ಮನೆಯ ಹಿಂದೆ ಇದ್ದ ಬೃಹತ್ ಗಾತ್ರದ ಮರ ಮನೆಯ ಮೇಲೆ ಬಿದ್ದಿದೆ.ಈ ಸಂದರ್ಭದಲ್ಲಿ ಅಕ್ಕ ಪಕ್ಕದ ಮನೆಯವರು ಬಂದು ಮನೆಯಲ್ಲಿದ್ದವರನ್ನು ಎಳೆದು ಹೊರ ಹಾಕಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆಯಷ್ಟೆ ಮನೆ ರಿಪೇರಿ ಮಾಡಿದ್ದೆವು ಈಗ ಮನೆ ಮೇಲೆ ಮರ ಬಿದ್ದು ಮನೆ ಸಂಪೂರ್ಣ ಜಖಂಗೊಂಡಿದೆ ಮನೆಯ ಒಳಗಿದ್ದ ಪಾತ್ರೆ ಇನ್ನಿತರೆ ಸಾಮಾನುಗಳು ಹಾಳಾಗಿದೆ ಎಂದು ಗಿರಿಜಾರವರು ಬೇಸರದಿಂದ ಹೇಳುತ್ತಾರೆ.
ಈ ಭಾಗದಲ್ಲಿ ಸಾಕಷ್ಟು ಮರಗಳು ಮನೆಯ ಸಮೀಪ ಇದ್ದು ಪ್ರತೀ ವರ್ಷ ಮನೆಯ ಮೇಲೆ ಮರಗಳು ಬಿದ್ದು ಸಾಕಷ್ಟು ಅನಾಹುತಗಳು ಸಂಭವಿಸುತ್ತಲೇ ಇದೆ. ಅರಣ್ಯ ಇಲಾಖೆ ಮನೆಯ ಸಮೀಪ ಇದ್ದ ಮರಗಳನ್ನು ತೆರವು ಮಾಡುವ ಕೆಲಸವನ್ನು ಮಾಡಬೇಕು ಎಂದು ಗ್ರಾಮಸ್ಥ ಶ್ರೀದರ್ ಒತ್ತಾಯಿಸಿದ್ದಾರೆ