ಕಳಸ ಲೈವ್ ವರದಿ
ಯಕ್ಷಗಾನವೆಂದರೆ ಪುರುಷ ಪ್ರಧಾನವಾದದ್ದು, ರಂಗದಲ್ಲಿ ಪುರುಷರೇ ಮಹಿಳೆಯರಾಗುತ್ತಿದ್ದರು. ಆದರೆ ಇಲ್ಲಿ ಎಲ್ಲವೂ ಪುರುಷಮಯ ಎಂಬ ಕಾಲ ಬದಲಾಗಿದೆ. ಪುರುಷ ಪ್ರಧಾನವಾದ ಯಕ್ಷಗಾನ ಕ್ಷೇತ್ರದಲ್ಲಿ ಕಳಸ ತಾಲ್ಲೂಕಿನ ಹಳುವಳ್ಳಿಯ ಕು|| ಟಿ.ಎನ್ ಶ್ರೀ ರಕ್ಷಾ ಭಟ್ ಗಮನ ಸೆಳೆಯುತ್ತಿದ್ದಾರೆ.
ಹಳುವಳ್ಳಿಯ ಟಿ.ಕೆ ನಾರಾಯಣ ಭಟ್ ಹಾಗೂ ಜ್ಯೋತಿಯವರ ಪುತ್ರಿಯಾಗಿ 2001ರ ಡಿಸೆಂಬರ್ 5 ರಂದು ಜನಿಸಿದ್ದರು. ತನ್ನ ನಾಲ್ಕನೇ ವಯಸ್ಸಿಗೆ ಯಕ್ಷಗಾನದಲ್ಲಿ ದೇವೇಂದ್ರನ ಪಾತ್ರ ಮಾಡಿ ಸೈ ಎಣಿಸಿಕೊಂಡಿದ್ದರು.ನೂಲಿನಂತೆ ಸೀರೆ ತಾಯಿಯಂತೆ ಮಗಳು ಎಂಬಂತೆ ತನ್ನ ತಾಯಿ ಜ್ಯೋತಿ ಭಟ್ ಮಗಳಿಗೆ ಯಕ್ಷಗಾನದ ಮೊದಲ ಗುರು. ಜ್ಯೋತಿ ಭಟ್ ಯಕ್ಷಗಾನ ಕಲಾವಿಧರಾಗಿ ಹಳುವಳ್ಳಿಯಲ್ಲಿ ಶ್ರೀ ಕುಮಾರ ಸಾಂಸ್ಕøತಿಕ ಪ್ರತಿಷ್ಠಾನವನ್ನು ಹುಟ್ಟು ಹಾಕಿ ಈ ಮುಖಾಂತರ ನೂರಾರು ಮಕ್ಕಳಿಗೆ ಯಕ್ಷಗಾನ ಗುರುವಾದವರು.
ಸುಮದ ಗಿಡವೊಂದು ಸುಮವನ್ನೇ ನೀಡುವಂತೆ ಮಗಳಿಗೆ ಸಣ್ಣ ವಯಸ್ಸಿನಲ್ಲಿಯೇ ಯಕ್ಷಗಾನದ ಆಸಕ್ತಿಯನ್ನು ಬೆಳೆಸಿ ಮಾತುಗಾರಿಕೆಯನ್ನು ಕಲಿಸುತ್ತಾ ಅಮ್ಮನ ಗರಡಿಯಲ್ಲಿಯೇ ತನ್ನ ಬಾಲ್ಯಾವಸ್ಥೆಯಲ್ಲಿ ಯಕ್ಷಗಾನ ರಂಗಕ್ಕೆ ಕಾಲಿಟ್ಟಿದ್ದರು. ನಂತರ ದಿನಕರ ಪಚ್ಚನಾಡಿ ಮತ್ತು ತನ್ನ ತಾಯಿಯ ಗುರುಗಳಾದ ರಮೇಶ್ ಶೆಟ್ಟಿ ಬಾಯರು ಅವರಿಂದ ಯಕ್ಷಗಾನವನ್ನು ಮತ್ತಷ್ಟು ಕರಗತ ಮಾಡಿಕೊಂಡರು.
ಇವರ ವೇಷಧಾರಿಕೆಯ ಗತ್ತು ನೋಡುಗರನ್ನು ಮತ್ತಷ್ಟು ಸೆಳೆಯುತ್ತದೆ. ಪುರುಷರಿಗೆ ಕಡಿಮೆ ಇಲ್ಲದಂತೆ ಕುಣಿಯುವ ಇವರು ಕುಬೇರ, ಚಂಡಾಸುರ, ಸುದರ್ಶನ, ಬಬ್ರುವಾಹನ, ಮಾಲಿನಿ, ದೇವೇಂದ್ರ, ದೇವಿ, ಕೌಶಿಕೆ, ವಿದ್ಯುನ್ಮಾಲಿ, ಯಕ್ಷ, ರಕ್ತೇಶ್ವರಿ, ಮಧು ಕೈಟಭ, ಕೃಷ್ಣ, ಸತ್ಯಭಾಮೆ, ಇಂದ್ರಜಿತು, ಅರ್ಜುನ, ಹಿರಣ್ಯಕ, ವಿಷ್ಣು, ಸುಧನ್ವ, ದಾಕ್ಷಾಯಿಣಿ, ಈಶ್ವರ, ಶ್ವೇತ ಕುಮಾರ, ತ್ರಿಲೋಕ ಸುಂದರಿ, ಸೀತಕೇತ, ಮಹಿಷಾಸುರ, ರಾಮ, ಕಾಳಿಂಗ, ಭೂದೇವಿ ಮುಂತಾದ ಪಾತ್ರಗಳಿಗೆ ಜೀವ ತುಂಬ ಬಲ್ಲರು.
ಇವರು ಹಳುವಳ್ಳಿ, ಕಳಸ, ಬಾಳೆಹೊಳೆ, ಕೆಳಭಾಗ, ಸಂಸೇ, ಹೊರನಾಡು, ದೆಹಲಿ, ಮುಂಬಯಿ, ಚಿಕ್ಕಮಗಳೂರು, ಉಜಿರೆ, ಧರ್ಮಸ್ಥಳ, ಮೂಡಬಿದ್ರೆ, ಪಡುಬಿದ್ರೆ, ಕಾರ್ಕಳ, ಸುರತ್ಕಲ್, ಮಂಗಳೂರು, ಬೀದರ್, ಬೆಳಗಾವಿ, ದಾವಣಗೆರೆ, ಬೆಂಗಳೂರು, ಹಾಸನ, ಚನ್ನರಾಯಪಟ್ಟಣ, ತುಮಕೂರು, ಬೇಲೂರು, ಕಡೂರು, ಶಿವಮೊಗ್ಗ ಸೇರಿದಂತೆ ರಾಜ್ಯ ಹೊರರಾಜ್ಯಗಳಲ್ಲಿ 200ಕ್ಕೂ ಹೆಚ್ಚು ಯಕ್ಷಗಾನವನ್ನು ಆಡಿ ತೋರಿಸಿದ್ದಾರೆ.
ಯಕ್ಷಗಾನ ನಾಟಕದಲ್ಲಿ ಹೆಚ್ಚಿನ ಅಭಿರುಚಿಯನ್ನು ಹೊಂದಿರುವ ಇವರು ಕಲಿಕೆಯಲ್ಲೂ ಮುಂದಿದ್ದಾರೆ. ತನ್ನ ಬಾಲ್ಯದ ವಿದ್ಯಾಭ್ಯಾಸವನ್ನು ಬಸರಿಕಟ್ಟೆ ಶ್ರೀ ಸದ್ಗುರು ಅಂಗ್ಲಮಾಧ್ಯಮ ಶಾಲೆಯಲ್ಲಿ ಮುಗಿಸಿ ಸದ್ಯ ಮಂಗಳೂರಿನಲ್ಲಿ ಎಂಬಿಎ ಮಾಡುತ್ತಿದ್ದಾರೆ.
ಯಕ್ಷಗಾನ ಗಂಡು ಕಲೆ. ಆದರೆ ಈಗ ಗಂಡು ಮಕ್ಕಳ ಜೊತೆ ಹೆಣ್ಣು ಮಕ್ಕಳು ಪೈಪೆÇೀಟಿ ನೀಡುತ್ತಾ ಇದ್ದಾರೆ. ಎಲ್ಲಾ ಕ್ಷೇತ್ರದಲ್ಲಿಯೂ ತೊಡಗಿಸಿ ಕೊಂಡಿದ್ದಾರೆ. ಆದರೆ ಮಲೆನಾಡು ಭಾಗದಲ್ಲಿ ಆಸಕ್ತಿ ಕಡಿಮೆ ಅಂತ ಕಾಣಿಸುತ್ತಾ ಇದೆ. ಮಲೆನಾಡಲ್ಲಿ ಹೆಚ್ಚು ಪ್ರತಿಭೆ ಗಳು ಇದ್ದಾರೆ. ಆದರೆ ಹೆಚ್ಚಿನ ವಿದ್ಯಾಬ್ಯಾಸಕ್ಕೆ ತೊಂದರೆ ಆಗ್ತದೆ ಅಂತ ಓದಿನ ಜೊತೆಯಲ್ಲಿ ತೊಡಗಿಸಿ ಕೊಳ್ಳುವುದಕ್ಕೆ ಹಿಂದೆ ಸರಿಯುತ್ತಿದ್ದಾರೆ. ವಿದ್ಯಾಬ್ಯಾಸ ಹಾಗೂ ಕೆಲಸ ಕಾರ್ಯಗಳ ಜೊತೆಗೆ ಕಲೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ರಕ್ಷಾ ಭಟ್ ಹೇಳುತ್ತಾರೆ.