ಕಳಸ ಲೈವ್ ವರದಿ
ಕಳಸ ಕಲಶೇಶ್ವರ ಸ್ವಾಮಿ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಪಟ್ಟಣದಲ್ಲಿ ಸಡಗರ ಸಂಭ್ರಮ ಮನೆ ಮಾಡಿದೆ.
ಈ ಜಾತ್ರಾ ಮಹೋತ್ಸವದಲ್ಲಿ ಪ್ರಧಾನ ಪಾತ್ರ ವಹಿಸುವುದು ಇಲ್ಲಿಯ ರಥೋತ್ಸವ. ಪೆ ೨೦ ರಂದು ನಡೆಯುವ ಕಳಸದ ಕಲಶೇಶ್ವರ ಜಾತ್ರೆ ವೇಳೆ ರಾಜಬೀದಿಯಲ್ಲಿ ಸಾಗುವ ರಥದ ವೈಭವವನ್ನು ಕಣ್ಣುಂಬಿಕೊಳ್ಳುವುದೇ ಭಾಗ್ಯ, ಅಷ್ಟೊಂದು ಜನ-ಮನ ಸೆಳೆಯುತ್ತದೆ ರಥೋತ್ಸವ. ತೇರಿನ ಅಲಂಕಾರದ ಜವಾಬ್ದಾರಿ ಹೊರುವವರು ಈ ಊರಿನ ಮೂಲ ನಿವಾಸಿಗಳಾದ ಗಿರಿಜನ ಪಂಗಡದ ಗೌಡಲು ಜನಾಂಗದವರು ಮತ್ತು ವಿಶ್ವಕರ್ಮ ಸಮಾಜದವರು. ಇವರು ಕಟ್ಟುವ ರಥ ಮನಮೋಹಕವಾಗಿದ್ದು, ಜಾತ್ರೆಯ ಸೊಬಗನ್ನು ರಥ ಇಮ್ಮಡಿಗೊಳಿಸುತ್ತದೆ.
ರಥೋತ್ಸವ ಹತ್ತಿರ ಬರುತ್ತಿದ್ದಂತೆ ಈ ಜನಾಂಗದವರು ಹಗಲಿರುಳೆನ್ನದೇ ಶ್ರಮವಹಿಸಿ ತಮ್ಮ ಅದ್ಭುತ ಕೌಶಲ್ಯದಿಂದ ತೇರನ್ನು ಸಿದ್ಧಗೊಳಿಸುತ್ತಾರೆ.
ಹಿಂದಿನ ಕಾಲದಲ್ಲಿ ಶಿವನ ನಿತ್ಯ ಕೆಲಸಕ್ಕಾಗಿ ಕಾಶಿಯಿಂದ ಕಳಸಕ್ಕೆ ನಾಲ್ಕು ಮಂದಿ ಮೂಲನಿವಾಸಿಗಳನ್ನು ಕರೆದುಕೊಂಡು ಬರಲಾಗುತ್ತಿತ್ತು ಎಂಬ ಮಾತಿದೆ. ಅದರಂತೆ ಅಂದಿನಿAದ ಇಂದಿನವರೆಗೂ ಈಶ್ವರನ ನಿತ್ಯದ ಪ್ರತಿಯೊಂದು ಕೆಲಸ ಕಾರ್ಯಗಳಲ್ಲೂ ಈ ಜನಾಂಗದ ಮುಂಡಾಣ ಕುಡಿಗೆ, ಜೀರಿ ಕುಡಿಗೆ, ದಾಂಡಾನ ಕುಡಿಗೆ, ತೋಡು ಕುಡಿಗೆ, ಆರ್ಕುಡಿಗೆ ಕುಟುಂಬಗಳು ಶಿವನ ಕಾಯಕದಲ್ಲಿ ಭಾಗಿಯಾಗುತ್ತಿವೆ.
ಶ್ರೀ ಕ್ಷೇತ್ರದಲ್ಲಿ ಮೂಲನಿವಾಸಿ ಗಿರಿಜನರ ಪೈಕಿ ಗೌಡಲು ಜನಾಂಗಕ್ಕೆ ವಿಶೇಷ ಸ್ಥಾನವಿದೆ. ಜಾತ್ರೆಯಲ್ಲಂತೂ ಇವರ ಪಾತ್ರ ಅನನ್ಯ. ಇಲ್ಲಿ ಜಾತ್ರೆಗೆ ರಥವೇ ಪ್ರಾಧಾನ್ಯತೆ ಪಡೆದಿರುವ ಕಾರಣ ರಥವನ್ನು ಅತ್ಯಂತ ವಿಶಿಷ್ಟ ಮತ್ತು ಸುಂದರವಾಗಿ ನಿರ್ಮಿಸುವ ಕೈಂಕರ್ಯವನ್ನು ತಲೆತಲಾಂತರದಿAದ ನಿಷ್ಠೆ, ನಿಯಮದಿಂದ ಮಾಡಿಕೊಂಡು ಬರುತ್ತಿದ್ದಾರೆ. ಈಗೀಗ ಹಿರಿಯರೊಂದಿಗೆ ಯುವ ಜನಾಂಗವೂ ಸ್ವಾಮಿ ಸೇವೆಯಲ್ಲಿ ಭಾಗವಹಿಸುತ್ತಿರುವುದು ಅವರ ಸೇವಾ ಕಾರ್ಯಕ್ಕೆ ನಿದರ್ಶನ.
ಜಾತ್ರೆ ಸಮೀಪಿಸುತ್ತಿದ್ದಂತೆ ದೇವಸ್ಥಾನದಿಂದ ಮೂಲನಿವಾಸಿ ಗೌಡಲು ಜನಾಂಗದ ಮುಖಂಡರೊಬ್ಬರಿಗೆ ಆಹ್ವಾನ ಕಳಿಸಲಾಗುತ್ತದೆ. ದೇವಸ್ಥಾನದ ಧ್ವಜಸ್ತಂಭಕ್ಕೆ ಗರುಡ ಏರಿಸಿದ ಮಾರನೇ ದಿನವೇ ಮೂಲ ನಿವಾಸಿಗಳು ಕಾಡಿಗೆ ತೆರಳಿ ರಥಕ್ಕಾಗಿ ಬೆತ್ತ, ಬಿದಿರುಗಳನ್ನು ಸಂಗ್ರಹಿಸುತ್ತಾರೆ. ಬಳಿಕ ಬ್ರಹ್ಮರಥ ಕಟ್ಟಲು ಆರಂಭಿಸುತ್ತಾರೆ. ಬಿದಿರು ಮತ್ತು ಅಡಿಕೆ ಮರದ ಸಲಾಕೆಗಳನ್ನು ತಯಾರಿಸಿ ರಥದ ಮೇಲ್ಬಾಗ ಕಟ್ಟುತ್ತಾರೆ. ಬೆತ್ತದ ಸೀಳುಗಳನ್ನು ಉಪಯೋಗಿಸಿ ಕಟ್ಟುವ ಅದ್ಭುತ ವಿನ್ಯಾಸದ ರಥವೇ ಇವರ ಸೇವೆ ಹಾಗೂ ಕೈಚಳಕಕ್ಕೆ ಹಿಡಿದ ಕನ್ನಡಿ.
ಹಿಂದಿನ ಕಾಲದಲ್ಲಿ ರಥವನ್ನು ಸಂಪೂರ್ಣವಾಗಿ ಬೆತ್ತದಿಂದಲೇ ಕಟ್ಟಿ ಅಲಂಕಾರಗೊಳಿಸಲಾಗುತ್ತಿತ್ತು. ಈಗ ಅಷ್ಟೊಂದು ಬೆತ್ತವನ್ನು ಸಂಗ್ರಹಿಸುವುದು ಕಷ್ಟವಾದ್ದರಿಂದ ಅಡಿಕೆ ಮರ, ಬಿದಿರಿನ ಸಹಾಯದಿಂದ ತೇರನ್ನು ಸಿದ್ಧಪಡಿಸಲಾಗುತ್ತಿದೆ.
ಈ ರೀತಿ ಸಾಂಪ್ರದಾಯಿಕ ಕೌಶಲ್ಯ, ಆಕರ್ಷಕ ಶೈಲಿಯಲ್ಲಿ ರಥ ನಿರ್ಮಿಸಿ, ಬಟ್ಟೆಯ ಪತಾಕೆಗಳಿಂದ ಸಿಂಗರಿಸಲಾಗುತ್ತದೆ. ರಥದ ಗಾಂಭೀರ್ಯತೆ, ಅದರ ಶೈಲಿ, ಸೊಬಗು, ವಿನ್ಯಾಸಗಳೇ ಇವರ ಕಲಾ ಕೌಶಲ್ಯಕ್ಕೆ ಸಾಕ್ಷಿ,
ಕಾಲ ಕಾಲಕ್ಕೆ ನಡೆಯುವ ದೇವಾಲಯದ ಪ್ರತಿಯೊಂದು ಉತ್ಸವಗಳಲ್ಲೂ ಮೂಲನಿವಾಸಿಗಳಿಗೆ ಪ್ರಾಧಾನ್ಯತೆ ಇದೆ. ವರ್ಷದಲ್ಲಿ ಸುಮಾರು ಮೂರು ತಿಂಗಳು ಕಲಶೇಶ್ವರನ ಉಚಿತ ಸೇವಾ ಕಾಯಕದಲ್ಲಿ ಇವರು ಶ್ರದ್ಧೆಯಿಂದ ತಮ್ಮನ್ನು ತೊಡಗಿಸಿ ಕೊಳ್ಳುತ್ತಾರೆ. ವರುಷಕ್ಕೊಂದು ಬಾರಿ ಪ್ರಸಾದ ರೂಪದಲ್ಲಿ ಉಪ್ಪನ್ನು ಕೊಡಲಾಗುತ್ತದೆ. ಇದೇ ಇವರು ತೆಗೆದುಕೊಳ್ಳುವ ಸಂಭಾವನೆ. ಕಲಶೇಶ್ವರನ ಉಪ್ಪಿನ ಋಣ ತೀರಿಸುವ ಸಲುವಾಗಿ sಸ್ವಾಮಿಯ ಸೇವೆಯನ್ನು ಈ ಜನಾಂಗ ತಪ್ಪದೇ ಮಾಡುತ್ತ ಬಂದಿದೆ.
Related Stories
October 6, 2024