ಕಳಸ ಲೈವ್ ವರದಿ
ಕೇಂದ್ರ ಸರಕಾರ ಪುರಸ್ಕೃತ ಪಶು ಸಂಜೀವಿನಿ ಯೋಜನೆಯ ಸಂಚಾರಿ ತುರ್ತು ಪಶು ಚಿಕಿತ್ಸಾ ವಾಹನ ಕಳಸ ತಾಲ್ಲೂಕಿನಲ್ಲಿ ಜಾನುವಾರುಗಳಿರುವ ಮನೆ ಬಾಗಿಲಿಗೆ ಹೋಗಿ ಚಿಕಿತ್ಸೆ ನೀಡಲು ಸಜ್ಜಾಗಿ ನಿಂತಿದೆ.
ರಾಜ್ಯದಾದ್ಯಂತ 290 ವಾಹನಗಳು ಮಂಜೂರಾಗಿದ್ದು, ಪ್ರತಿಯೊಂದು ತಾಲ್ಲೂಕು ಕೇಂದ್ರಗಳಲ್ಲೂ ಈ ವಾಹನ ತನ್ನ ಸೇವೆಯನ್ನು ನೀಡಲಿದೆ.
ತಮ್ಮ ಮನೆಯಲ್ಲಿರುವ ಹಸು, ಎತ್ತು, ಎಮ್ಮೆ, ಕುರಿ ಸೇರಿದಂತೆ ಯಾವುದೇ ಜಾನುವಾರುಗಳ ಆರೋಗ್ಯದಲ್ಲಿ ಏರುಪೇರು ಕಂಡು ಬಂದಲ್ಲಿ ಜಾನುವಾರುಗಳ ಮಾಲಿಕರು ಸಹಾಯವಾಣಿ 1962 ಗೆ ಕರೆ ಮಾಡಿದರೆ ಕೆಲ ಸಮಯದಲ್ಲಿಯೇ ಮನೆ ಬಾಗಿಲಿಗೆ ವಾಹನಗಳು ತೆರಳಿ ಚಿಕಿತ್ಸೆ ನೀಡಲಿವೆ.
ಈ ವಾಹನದಲ್ಲಿ ಒಬ್ಬ ಪಶು ವೈದ್ಯ, ಒಬ್ಬ ಇನ್ಸ್ಪೆಕ್ಟರ್ ಹಾಗೂ ಡ್ರೈವರ್ ಕಂ ಅಟೆಂಡರ್ಗಳನ್ನು ನೇಮಿಸಲಾಗಿದೆ.ಈ ಪಶು ಚಿಕಿತ್ಸಾ ಆಂಬುಲೆನ್ಸ್ನಲ್ಲಿ ಆಧುನಿಕ ಶಸ್ತ್ರ ಚಿಕಿತ್ಸಾ ಘಟಕ, ಪ್ರಯೋಗ ಶಾಲೆ ಮತ್ತು ಸ್ಕಾನಿಂಗ್ ಉಪಕರಣಗಳನ್ನು ಅಳವಡಿಸಲಾಗಿದೆ.
ಇದೊಂದು ಉತ್ತಮ ಯೋಜನೆಯಾಗಿದ್ದು, ಜಾನುವಾರುಗಳಿಗೆ ಆರೋಗ್ಯದಲ್ಲಿ ತೊಂದರೆಯಾದಾಗ ಈ ತುರ್ತು ಸೇವೆಯನ್ನು ಸಾರ್ವಜನಿಕರು ಬಳಸಿಕೊಳ್ಳಬೇಕು ಎಂದು ಪಶು ವೈದ್ಯ ಡಾ. ಯವರಾಜ್ ತಿಳಿಸಿದ್ದಾರೆ.