ಕಳಸ ಲೈವ್ ವರದಿ
ಅತ್ಯಂತ ನಿರೀಕ್ಷೆ ಮೂಡಿಸಿರುವ ಟೋಬಿ ಚಲನಚಿತ್ರ ಬಿಡುಗಡೆಗೆ ಕೆಲವೇ ಗಂಟೆಗಳು ಬಾಕಿ ಇದ್ದು, ಒಂದೆಡೆ ಚಿತ್ರ ಪ್ರೇಮಿಗಳು ಚಿತ್ರವನ್ನು ವೀಕ್ಷಿಸಲು ತುದಿಗಾಲಲ್ಲಿ ನಿಂತಿದ್ದರೆ, ಇನ್ನೊಂದೆಡೆ ಚಿತ್ರ ನಿರ್ಮಾಪಕ ರವಿ ರೈ ಅಭಿಮಾನಿಗಳು ಕಳಸದಲ್ಲಿ ಟೋಬಿಯ ಪ್ಲೆಕ್ಸ್ ಬ್ಯಾನರ್ ಗಳನ್ನು ಅಳವಡಿಸಿ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದ್ದಾರೆ.
ಟೋಬಿ ಚಿತ್ರ ಬಿಡುಗಡೆಗೆ ಮುನ್ನವೇ ಸಾಕಷ್ಟು ಸದ್ದು ಮಾಡುತ್ತಿದೆ. ಚಿತ್ರದ ಟ್ರೇಲರ್ ಸಾಕಷ್ಟು ಕುತೂಹಲ ಮೂಡಿಸಿದ್ದು, ಯುವ ಜನತೆ ಚಿತ್ರ ವೀಕ್ಷಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಇದೇ ತಿಂಗಳ 25 ರಂದು ಟೋಬಿ ಚಿತ್ರ ರಾಜ್ಯದಾದ್ಯಂತ ಬಿಡುಗಡೆಗೊಳ್ಳಲಿದೆ.
ಕಳಸದಲ್ಲಿ ಹೋಟೆಲ್, ರೆಸಾರ್ಟ್ ಉದ್ಯಮವನ್ನು ನಡೆಸಿಕೊಂಡು ಹಲವಾರು ಸಂಘಟನೆಗಳ ಮೂಲಕ ಬಡವರ ಪರ, ಆಟೋ ಚಾಲಕರ ಪರ, ನಿರಾಶ್ರಿತರ ಪರ, ಸಾರ್ವಜನಿಕ ಸಮಸ್ಯೆಗಳ ವಿರುದ್ಧ ದ್ವನಿ ಎತ್ತಿ ನ್ಯಾಯ ಕೊಡಿಸುತ್ತಿದ್ದರು, ಕಷ್ಟದ ಸಂದರ್ಭದಲ್ಲಿ ನೆರವಾಗುತ್ತಿದ್ದ ಬಿ.ವಿ ರವಿ ರೈ ನಿರ್ಮಾಣದ ಟೋಬಿ ಚಲನ ಚಿತ್ರ ಅವರ ಅಭಿಮಾನಿಗಳಿಗೆ ಸಹಜವಾಗಿಯೇ ಸಾಕಷ್ಟು ನಿರೀಕ್ಷೆ ಮತ್ತು ಸಂತೋಷವನ್ನು ಉಂಟು ಮಾಡಿದೆ.
ಪರಿಣಾಮ ಕಳಸ ಪಟ್ಟಣ, ಬಾಳೆಹೊಳೆ, ತನೂಡಿ ಬಾಗದಲ್ಲಿ ಚಿತ್ರ ಯಶಸ್ವಿಯಾಗಲೆಂದು ಹಾರೈಸಿ ರವಿ ರೈ ಅಭಿಮಾನಿಗಳು ಫ್ಲೆಕ್ಸ್ ಬ್ಯಾನರ್ ಗಳನ್ನು ಅಳವಡಿಸಿದ್ದಾರೆ.
ಮೈ ನೇಮ್ ಈಸ್ ಅಣ್ಣಪ್ಪ ಎಂಬ ತುಳು ಚಿತ್ರದ ಮೂಲಕ ಚಿತ್ರ ರಂಗ ಪ್ರವೇಶಿಸಿ ನಂತರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಗರಡ ಗಮನ ವೃಷಭ ವಾಹನ ಎಂಬ ಚಿತ್ರಗಳ ನಿರ್ಮಾಣಕ್ಕೆ ಬಂಡವಾಳ ಹೂಡಿ ಸೈ ಎನಿಸಿಕೊಂಡಿದ್ದರು. ಇದೀಗ ಟೋಬಿ ಚಿತ್ರಕ್ಕೆ ಪೂರ್ಣ ಪ್ರಮಾಣದ ನಿರ್ಮಾಪಕರಾಗಿ ಅಗಸ್ತ್ಯ ಫಿಲಂಸ್ ಎಂಬ ಚಿತ್ರ ನಿರ್ಮಾಣ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ.
ಈ ಬಗ್ಗೆ ಕಳಸ ಲೈವ್ ಜೊತೆ ಮಾತನಾಡಿದ ರವಿ ರೈ, ಚಿತ್ರ ಯಶಸ್ವಿಯಾಗಲೆಂದು ಹಾರೈಸಿದ ಕಳಸದ ಎಲ್ಲರಿಗೂ ನನ್ನ ವಂದನೆಗಳು.ನಿಮ್ಮ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ. ಚಿತ್ರವನ್ನು ಎಲ್ಲರೂ ವೀಕ್ಷಿಸಿ ಪ್ರೋತ್ಸಾಹಿಸಿ ಎಂದು ತಿಳಿಸಿದ್ದಾರೆ.