ಕಳಸ ಲೈವ್ ವರದಿ
ಮೂಡಿಗೆರೆ ತಾಲೂಕಿನ ಜನ್ನಾಪುರ ಗ್ರಾಮದ ಗಿರೀಶ್ (25) ಎಂಬುವರು ತನ್ನ ಸ್ನೇಹಿತನೊಂದಿಗೆ ಪ್ರಸಿದ್ಧ ತೀರ್ಥಕ್ಷೇತ್ರ ಕೇದಾರನಾಥ ಯಾತ್ರೆಗೆ ತೆರಳಿದ್ದ ಸಂದರ್ಭದಲ್ಲಿ ಸೋಮವಾರ ಗಿರೀಶ್ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ.
ಗಿರೀಶ್ ಅವರ ಸಂಬಂಧಿ ಅಡುಗೆ ಕಂಟ್ರಾಕ್ಟರ್ ಶಿಲ್ಪಿ ಅವರು ನೀಡಿರುವ ಮಾಹಿತಿಯಂತೆ, ಗಿರೀಶ್ ಯಾತ್ರೆಯ ಅವಧಿಯಲ್ಲಿ ನನ್ನೊಂದಿಗೆ ಸತತವಾಗಿ ಪೋನ್ ಸಂಪರ್ಕದಲ್ಲಿದ್ದರು. ಕೇದಾರನಾಥ ಕಡೆಗೆ ಬಸ್ನಲ್ಲಿ ಪ್ರಯಾಣಿಸುವಾಗ ದಾರಿಯಲ್ಲಿ ಊಟಕ್ಕೆಂದು ಗಿರೀಶ್ ಬಸ್ ನಿಂದ ಇಳಿದಿದ್ದರು. ಆ ಸಂದರ್ಭದಲ್ಲಿ ಹೃದಯಾಘಾತವಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಅವರ ಮೃತದೇಹವನ್ನು ರಿಷಿಕೇಷ ಸರಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಅಲ್ಲಿಂದ ಜನ್ನಾಪುರಕ್ಕೆ ಮೃತದೇಹವನ್ನು ತರಲು ಪ್ರಯತ್ನ ನಡೆಸಲಾಗುತ್ತಿದೆ. ಇದಕ್ಕಾಗಿ ಸ್ಥಳೀಯ ಜನಪ್ರತಿನಿಧಿಗಳ ಮತ್ತು ಜಿಲ್ಲಾಢಳಿತದ ನೆರವು ಕೋರಿದ್ದು, ಬುಧವಾರ ಸಂಜೆ ಹೊತ್ತಿಗೆ ಮೃತದೇಹ ಊರಿಗೆ ತಲುಪುವ ಸಾಧ್ಯತೆಯಿದೆ ಎಂದಿದ್ದಾರೆ.
ಜನ್ನಾಪುರದ ಚಂದ್ರು ಎನ್ನುವವರ ಪುತ್ರರಾದ ಗಿರೀಶ್ ಅಡುಗೆ ವೃತ್ತಿ ಮಾಡುತ್ತಿದ್ದರು. ಮೃತ ಗಿರೀಶ್ ತಂದೆ, ತಾಯಿ, ಸಹೋದರಿ ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ. ಗಿರೀಶ್ ಅವರನ್ನು ಕಳೆದುಕೊಂಡು ಕುಟುಂಬ ಕಂಗಾಲಾಗಿದೆ.