ಕಳಸ ಲೈವ್ ವರದಿ
ಮೂಡಿಗೆರೆ ತಾಲೂಕಿನ ಗೋಣಿಬೀಡು ಸಮೀಪದ ಜಿ.ಹೊಸಳ್ಳಿ ಗ್ರಾಮದಲ್ಲಿರುವ ಟಾಟಾ ಎಸ್ಟೇಟ್ ನಲ್ಲಿ 16 ಕಾಡಾನೆಗಳು ಬೀಡು ಬಿಟ್ಟಿವೆ. ಕಳೆದ ಅನೇಕ ದಿನಗಳಿಂದ ಜಿ.ಹೊಸಳ್ಳಿ, ಅರೇಹಳ್ಳಿ, ಚೀಕನಹಳ್ಳಿ, ಮಾಕೋನಹಳ್ಳಿ, ಮಲಸಾವರ ಸುತ್ತಮುತ್ತಲ ಪ್ರದೇಶಗಳಲ್ಲಿ ಈ ಕಾಡಾನೆಗಳು ಸುತ್ತು ಹೊಡೆಯುತ್ತಿವೆ.
ಕಾಡಾನೆ ಗುಂಪಿನಲ್ಲಿ ಮರಿಯಾನೆಗಳು ಇದ್ದು ಮಾನವ ಸಂಘರ್ಷಕ್ಕೆ ಕಾರಣವಾಗಿದೆ. ಕಾಡಾನೆಗಳ ಹಿಂಡಿನಿಂದ ಈ ಭಾಗದಲ್ಲಿ ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟವನ್ನು ಉಂಟುಮಾಡುತ್ತಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಯಾವ ಸಂದರ್ಭದಲ್ಲಿ ಎಲ್ಲಿ ಆನೆಗಳು ಪ್ರತ್ಯಕ್ಷವಾಗುತ್ತವೆ ಎಂದು ಜನರು ಆತಂಕದಿಂದ ಬದುಕುವಂತಾಗಿದೆ.
ಅರಣ್ಯ ಇಲಾಖೆಯ ಎಲಿಪೆಂಟ್ ಟಾಸ್ಕ್ ಫೊರ್ಸ್ ಸಿಬ್ಬಂದಿ ಆನೆಗಳನ್ನು ಓಡಿಸಲು ಪ್ರಯತ್ನಿಸಿದರೂ ಅವು ಸ್ಥಳಬಿಟ್ಟು ಕದಲುತ್ತಿಲ್ಲ. ಅಲ್ಲಿಯೇ ಸುತ್ತು ಮುತ್ತ ಅಲೆದಾಡುತ್ತಾ ಕಾಫಿ ತೋಟಗಳನ್ನು ನಾಶಪಡಿಸುತ್ತಿವೆ. ಇದರಿಂದ ಕಾಫಿ ತೋಟಗಳಿಗೆ ಹೋಗಲು ಭಯಪಡುವಂತಾಗಿದೆ. ಕಾರ್ಮಿಕರು ಸಹ ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆಂದು ಕಾಫಿ ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ.