ಕಳಸ ಲೈವ್ ವರದಿ
ಮೂಡಿಗೆರೆ ತಾಲೂಕಿನ ದಾರದಹಳ್ಳಿ ಸಮೀಪದ ಹೇಮಾವತಿ ನದಿಯಲ್ಲಿ 60 ವರ್ಷದ ವೃದ್ಧೆ ಶವವೊಂದು ಮರದ ಕೊಂಬೆಯೊಂದಕ್ಕೆ ಸಿಕ್ಕಿಹಾಕಿಕೊಂಡ ಸ್ಥಿತಿಯಲ್ಲಿ ಬುಧವಾರ ಪತ್ತೆಯಾಗಿದೆ.
ಮೃತರು ದಾರದಹಳ್ಳಿ ಕಾಲೋನಿಯ ದೇವಮ್ಮ (60) ಎಂದು ತಿಳಿದುಬಂದಿದೆ. ದೇವಮ್ಮ ಅವರು ದಾರದಹಳ್ಳಿ ಕಾಲೋನಿಯಲ್ಲಿ ವಾಸ ಮಾಡುತ್ತಿದ್ದು, ಕಳೆದ 3 ದಿನದಿಂದ ಮನೆಯಿಂದ ಕಾಣೆಯಾಗಿದ್ದರು. ದೇವಮ್ಮ ಅವರು ಹಾಗಾಗ ನೆಂಟರ ಮನೆಗೆ ಹೋಗಿ ಬರುತ್ತಿದ್ದರಿಂದ ಅವರ ಪುತ್ರರು ಈಗಲೂ ನೆಂಟರ ಮನೆಗೆ ಹೋಗಿರಬಹುದೆಂದು ಭಾವಿಸಿ ಸುಮ್ಮನಿದ್ದರೆನ್ನಲಾಗಿದೆ. ಆದರೆ ಬುಧವಾರ ದೇವಮ್ಮ ಅವರ ಮೃತ ದೇಹ, ವಾಸದ ಮನೆಯಿಂದ ಸುಮಾರು ಒಂದೂವರೆ ಕಿ,ಮೀ ದೂರದ ಹೇಮಾವತಿ ನದಿಯ ಪಕ್ಕದಲ್ಲಿರುವ ಮರದ ಕೊಂಬೆಯೊಂದಕ್ಕೆ ಸಿಕ್ಕಿಹಾಕಿಕೊಂಡಿದ್ದು, ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದು, ಸಮಾಜ ಸೇವಕ ಫಿಶ್ಮೋಣು ತಂಡದ ಸಹಾಯದಿಂದ ಶವವನ್ನು ಹೊರ ತೆಗೆಯಲಾಯಿತು. ಘಟನೆ ಸತ್ಯತೆ ಬಗ್ಗೆ ಪೊಲೀಸರ ತನಿಖೆಯಿಂದ ಹೊರ ಬೀಳಬೇಕಿದೆ.