ಕಳಸ ಲೈವ್ ವರದಿ
ಕಳಸ ತಾಲ್ಲೂಕಿನ ಸಮಗ್ರ ಅಭಿವೃದ್ಧಿ ಮಾಡಿದ ಆಧಾರದಲ್ಲಿ ಮತ ಯಾಚನೆ ಮಾಡುತ್ತಿದ್ದೇನೆ. ಹಲವಾರು ಸೇತುವೆ, ಪದವಿ ಕಾಲೇಜು, ರಸ್ತೆ ಅನುದಾನ, ಆಸ್ಪತ್ರೆ ಆರಂಭಿಸಿದ್ದೇನೆ. ಕಳಸದ ಎಲ್ಲ ಅಭಿವೃದ್ಧಿ ಕೆಲಸ ಮುಂದುವರೆಸುತ್ತೇನೆ.ಕಳಸಕ್ಕೆ ವಿಧಾನ ಪರಿಷತ್ ಸದಸ್ಯ ಅಥವಾ ಸಂಸದೆ ಏನು ಮಾಡಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ಎಂ.ಪಿ. ಕುಮಾರಸ್ವಾಮಿ ಪ್ರಶ್ನಿಸಿದರು.
ಭಾನುವಾರ ಕಳಸ ಪಟ್ಟಣದಲ್ಲಿ ರೋಡ್ ಶೋ ನಡೆಸಿ ನಂತರ ಮಾತನಾಡಿದ ಅವರು ‘ಕೇವಲ ಭಾವನಾತ್ಮಕ ವಿಷಯಗಳ ಮೇಲೆ ರಾಜಕಾರಣ ಮಾಡುವ ಬಿಜೆಪಿ ಪಕ್ಷ ನಾನು ಜನಪರ ಹೋರಾಟ ಮಾಡಿದ್ದರಿಂದ ನನ್ನನ್ನು ಸಹಿಸಲಿಲ್ಲ.
ನನ್ನ ಕ್ಷೇತ್ರದ ಜನರಿಗೆ ಅತಿವೃಷ್ಟಿ ಪರಿಹಾರ ಸಿಗಲಿಲ್ಲ ಎಂದು ನಾನು ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಿದೆ.ಆನೆ ಹಾವಳಿ ಮತ್ತು ಕಸ್ತೂರಿ ರಂಗನ್ ವರದಿ ವಿರುದ್ಧ ಜೋರಾಗಿ ದನಿ ಎತ್ತಿದೆ.ಇದು ಆಡಳಿತದಲ್ಲಿದ್ದ ಬಿಜೆಪಿಯನ್ನು ಕೆರಳಿಸಿತ್ತು.ಈ ಚುನಾವಣೆಯಲ್ಲಿ ನನಗೆ ಟಿಕೆಟ್ ಕೊಡದೆ ನನ್ನ ರಾಜಕೀಯ ಜೀವನ ಮುಗಿಸುವ ಚಿತಾವಣೆ ಮಾಡಿದರು.
ಪಕ್ಷವು ನಮ್ಮ ಆಸ್ತಿ ಎಂಬಂತೆ ನಡೆದುಕೊಂಡ ಕೆಲವರು ಇಂದು ನಾನು ಪಕ್ಷದಿಂದ ಹೊರಬಂದ ನಂತರ ನನ್ನ ವಿರುದ್ಧ ಹಗೆ ಸಾಧಿಸುತ್ತಿದ್ದಾರೆ.ನನ್ನಿಂದ ಬಿಜೆಪಿ ಅಭ್ಯರ್ಥಿಗೆ ಸೋಲುವ ಭೀತಿಯಿದೆ.ನನ್ನ ವಿರುದ್ಧ ಎಲ್ಲೆಡೆ ಅಪಪ್ರಚಾರ ಮಾಡಿದರೂ ಯಾವುದೇ ಉಪಯೋಗ ಆಗದೆ ಕಾಂಗ್ರೆಸ್ಗೆ ಮತ ಹಾಕಿಸಿ ನನ್ನ ಗೆಲುವು ತಪ್ಪಿಸುವ ಯತ್ನವನ್ನೂ ಜಿಲ್ಲೆಯ ಬಿಜೆಪಿ ಮುಖಂಡರು ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಆರೋಪ ಮಾಡಿದರು.
ಇದಕ್ಕು ಮೊದಲು ಮಾತನಾಡಿದ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ರಂಜನ್ ಅಜಿತ್, ಬಿಜೆಪಿ ತೊರೆದ ಎಂ.ಪಿ.ಕುಮಾರಸ್ವಾಮಿ ಅವರ ತೇಜೋವಧೆಯನ್ನು ಆ ಪಕ್ಷ ವ್ಯವಸ್ಥಿತವಾಗಿ ಮಾಡುತ್ತಿದೆ.ಆನೆ ಹಾವಳಿ ತಡೆಯುವ ಬಗ್ಗೆ, ಬಿಪಿಎಲ್ ಚೀಟಿ ರದ್ದು ಮಾಡಿದ ಬಗ್ಗೆ ಹೋರಾಟ ಮಾಡಿದ್ದು ಎಂ.ಪಿ.ಕುಮಾರಸ್ವಾಮಿ ಮಾತ್ರ.ಆಗ ಯಾವ ಬಿಜೆಪಿ ಮುಖಂಡರು ಕೂಡ ಮಾತನಾಡಲಿಲ್ಲ ಎಂದು ಹರಿಹಾಯ್ದರು.
ಜೆಡಿಎಸ್ ಮುಖಂಡ ಜ್ವಾಲನಯ್ಯ ಮಾತನಾಡಿ, ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ 3 ತಿಂಗಳಲ್ಲಿ ಕಳಸದ ಎಲ್ಲ ಸಮಸ್ಯೆ ಪರಿಹಾರ ಆಗಲಿದೆ.ನಮ್ಮ ಕೆಲಸ ಮಾಡದಿದ್ದರೆ ಹಿರೇಬೈಲಿನಿಂದ ಈಚೆ ದಾಟಲು ನಾವು ಬಿಡುವುದಿಲ್ಲ ಎಂದರು.
ಪ್ರಾಸ್ತಾವಿಕ ಮಾತನಾಡಿದ ಮಂಜಪ್ಪಯ್ಯ, ಇನಾಂ ಭೂಮಿ ಮತ್ತು ಭದ್ರಾ ಮೇಲ್ದಂಡೆ ವಿವಾದಕ್ಕೆ ಕಾರಣೀಭೂತರಾಗಿದ್ದ ಮೋಟಮ್ಮ ಈಗ ಯಾವ ಮುಖ ಇಟ್ಟುಕೊಂಡು ತಮ್ಮ ಮಗಳಿಗಾಗಿ ಮತಯಾಚನೆ ಮಾಡುತ್ತಾರೆ ಎಂದು ಪ್ರಶ್ನಿಸಿದರು.
ದೇವೇಗೌಡರು ಭದ್ರಾ ಮೇಲ್ದಂಡೆ ಸಮಸ್ಯೆ ನಿವಾರಿಸಿದ್ದನ್ನು ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಇನಾಂ ಭೂಮಿ ಖುಲ್ಲಾ ಮಾಡುವುದನ್ನು ತಡೆದಿದ್ದನ್ನು ಕಳಸದ ಜನತೆ ಮರೆಯಬಾರದು ಎಂದರು.
ಮುಖಂಡರಾದ ಸಂತೋμï, ಬ್ರಹ್ಮದೇವ, ಕೇಶವೇಗೌಡ,ರವಿ ಕುಮಾರ್, ಆಶಾಲತಾ, ಸುಜಿತ್, ಭೋಜರಾಜ್ ಇದ್ದರು.