ಕಳಸ ಲೈವ್ ವರದಿ
ಕಳೆದ ತಿಂಗಳು ಅರಣ್ಯ ಇಲಾಖೆಯ ಇಬ್ಬರು ಸಿಬ್ಬಂದಿಯ ಪ್ರಾಣ ಉಳಿಸಿದ್ದ ಯುವಕ ವಿಲ್ಸನ್ ಅವರನ್ನು ಅರಣ್ಯ ಇಲಾಖೆಯು ಗೌರವಿಸಿತು.
ಸಂಜೀವಮಟ್ಟಿಲು ಬಳಿ ಕಾಡಾನೆ ಓಡಿಸುವಾಗ ಭದ್ರಾ ನದಿಗೆ ಬಿದ್ದಿದ್ದ ಇಬ್ಬರು ಅರಣ್ಯ ಸಿಬ್ಬಂದಿಯನ್ನು ದುಂಡಿಗೆಯ ಕೃಷಿಕ ಕುಟುಂಬದ ಸದಸ್ಯ ವಿಲ್ಸನ್ ತಮ್ಮ ಪ್ರಾಣದ ಹಂಗು ತೊರೆದು ಕಾಪಾಡಿದ್ದರು.
ಪಟ್ಟಣದ ವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿ ವಿಶ್ವ ಅರಣ್ಯ ದಿನದ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಕಳಸೇಶ್ವರ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ರುದ್ರಯ್ಯ ಆಚಾರ್, ಆನೆ ಕಾರ್ಯಪಡೆಯ ವಲಯ ಅರಣ್ಯಾಧಿಕಾರಿ ರಂಗನಾಥ್ ಮತ್ತಿತರು ವಿಲ್ಸನ್ ಅವರಿಗೆ ಸ್ಮರಣಿಕೆ ಮತ್ತು ನಗದು ನೀಡಿ ಗೌರವಿಸಿದರು.
ವಿಲ್ಸನ್ ಅವರಿಂದ ಜೀವದಾನ ಪಡೆದ ಅರಣ್ಯ ರಕ್ಷಕ ರವಿ ಮತ್ತು ಆನೆ ಕಾರ್ಯ ಪಡೆ ಸಿಬ್ಬಂದಿ ಗಜೇಂದ್ರ ಮಾತನಾಡಿ, ವಿಲ್ಸನ್ ಅವರ ಸಾಹಸದಿಂದ ನಾವು ಬದುಕಿ ಉಳಿದೆವು.ಅವರ ಸಮಯಸ್ಫೂರ್ತಿ ನಮಗೆಲ್ಲ ಮಾದರಿ ಎಂದು ಸ್ಮರಿಸಿದರು.
ವಲಯ ಅರಣ್ಯಾಧಿಕಾರಿ ರಂಗನಾಥ್ ಮಾತನಾಡಿ, ಕಾಡಿನಲ್ಲಿ ಆನೆಗಳ ಸಂಖ್ಯೆ ಹೆಚ್ಚಿದ್ದು ನೀರು, ಆಹಾರ ಅರಸಿ ಊರಿನ ಕಡೆಗೆ ಬರುತ್ತಿವೆ.ಆನೆ ಕಾಡಿಗೆ ಭೂಷಣ, ಅದು ಸೂಕ್ಷ್ಮ ಸ್ವಭಾವದ ಜೀವಿ.ನಾವು ಆನೆ ಕಂಡು ಹೆದರುತ್ತೇವೆ.ಆದರೆ ಎಲ್ಲ ಆನೆಗಳನ್ನೂ ಹಿಡಿಯಲು ಆಗದು ಎಂಬುದು ಸತ್ಯ ಎಂದರು.
ವಿಲ್ಸನ್ ಅವರಂತೆ ಆನೆ ಕಾರ್ಯ ಪಡೆಯ ಎಲ್ಲ ಸದಸ್ಯರು ಕೂಡ ಆತ್ಮಸ್ಥೈರ್ಯದಿಂದ ಕೆಲಸ ಮಾಡಬೇಕಿದೆ.ಆನೆ ಓಡಿಸುವಾಗ ನಿಮ್ಮ ಪ್ರಾಣ, ನಿಮ್ಮ ಜೊತೆಯವರ ಪ್ರಾಣ ಹಾಗೂ ಬೆಲೆ ಬಾಳುವ ವಸ್ತುಗಳ ಬಗ್ಗೆಯೂ ಗಮನ ನೀಡಬೇಕು ಎಂದು ಅವರು ಕಿವಿಮಾತು ಹೇಳಿದರು.
ಕಳಸದ ದುಗ್ಗಪ್ಪನಕಟ್ಟೆಯ ಟ್ರೀಪಾರ್ಕ್ ಅಭಿವೃದ್ಧಿ ಬಗ್ಗೆ ಗ್ರಾಮ ಅರಣ್ಯ ಸಮಿತಿಯು ಗಮನ ಹರಿಸಲಿದೆ.ಈ ಬಗ್ಗೆ ಇಲಾಖೆ ಸಹಕಾರ ಅಗತ್ಯ ಎಂದು ಕಳಸೇಶ್ವರ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ರುದ್ರಯ್ಯ ಆಚಾರ್ ತಿಳಿಸಿದರು.
ಉಪ ವಲಯ ಅರಣ್ಯಾಧಿಕಾರಿಗಳಾದ ಮಂಜುನಾಥ್, ಬಸವರಾಜ್, ಸುಹಾಸ್, ಅರಣ್ಯ ಸಮಿತಿ ಸದಸ್ಯರಾದ ಗಣೇಶ್ ಭಟ್, ಪ್ರಿಯಾಕಾರಣಿ ಇದ್ದರು.
ಕಳಸದಿಂದ ಕಾಡಾನೆ ಓಡಿಸುವಾಗ ಅನೇಕ ಬಾರಿ ಸಹಕಾರ ನೀಡಿದ್ದ ಚಿಪ್ಪಲಮಗೆ ಜಯರಾಮ ಮತ್ತು ಹೆಬ್ಬೊಳೆಯ ರೇವಣ್ಣ ಅವರನ್ನೂ ಇದೇ ಸಂದರ್ಭದಲ್ಲಿ ಅರಣ್ಯ ಇಲಾಖೆ ಅಭಿನಂದಿಸಿತು.