ಪ್ರೇಮ ವೈಫಲ್ಯ: ವಿದ್ಯಾರ್ಥಿನಿ ಆತ್ಮಹತ್ಯೆ
ಕಳಸ ಲೈವ್ ವರದಿ
ಕಳಸ:ಪಟ್ಟಣದ ದ್ವಿತೀಯ ಪಿಯು ವಿದ್ಯಾರ್ಥಿನಿಯೊಬ್ಬರು ಪ್ರೇಮ ವೈಫಲ್ಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಂಸೆ ಗ್ರಾಮದ ವಾಸಿಯಾಗಿದ್ದ 17 ವರ್ಷದ ಈ ಬಾಲಕಿ ಕಾರಗದ್ದೆ ಸಮೀಪದ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು.ಆದರೆ ಇತ್ತೀಚೆಗೆ ಇಬ್ಬರ ನಡುವೆ ಮನಸ್ತಾಪ ಆಗಿ ಯುವಕ ಆಕೆಯ ಪ್ರೀತಿಯನ್ನು ನಿರಾಕರಿಸಿದ್ದನು ಎಂದು ಬಾಲಕಿಯ ಪೋಷಕರು ಕುದುರೆಮುಖ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ಪ್ರೇಮ ವೈಫಲ್ಯದ ಕಾರಣಕ್ಕೆ ಮನನೊಂದಿದ್ದ ಬಾಲಕಿ ಕಳೆದ ಬುಧವಾರ ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಮಂಗಳೂರಿನಲ್ಲಿ ಚಿಕಿತ್ಸೆ ಯಶಸ್ವಿ ಆಗದೆ ಶನಿವಾರ ರಾತ್ರಿ ಪ್ರಾಣ ಬಿಟ್ಟಿದ್ದಾಳೆ.
ಕುದುರೆಮುಖ ಪೊಲೀಸರಿಗೆ ಬಾಲಕಿಯ ತಂದೆ ದೂರು ನೀಡಿದ್ದು, ಕಾರಗದ್ದೆ ಸಮೀಪದ ನಿತೇಶ ಎಂಬ 25 ವರ್ಷ ವಯಸ್ಸಿನ ಯುವಕ ನನ್ನ ಮಗಳನ್ನು ಪ್ರೀತಿಸಿ, ಮೋಸ ಮಾಡಿ ಸಾವಿಗೆ ಕಾರಣನಾಗಿದ್ದಾನೆ. ಈ ಬಗ್ಗೆ ನನ್ನ ಮಗಳು ಆಸ್ಪತ್ರೆಗೆ ಹೋಗುವ ದಾರಿಯಲ್ಲಿ ತಿಳಿಸಿದ್ದು, ಪತ್ರ ಕೂಡ ಬರೆದಿದ್ದಾಳೆ. ಆರೋಪಿ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಕೋರಿದ್ದಾರೆ.
- ಆರೋಪಿ ವಿರುದ್ಧ ಫೋಕ್ಸೋ ಕಾಯ್ದೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.ಆರೋಪಿ ನಾಪತ್ತೆಯಾಗಿದ್ದಾನೆ.