ಕಳಸ ಲೈವ್ ವರದಿ
ಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿವೇಶನ ಮತ್ತು ವಿವಿಧ ಇಲಾಖೆಗಳಿಗೆ ಭೂಮಿ ಮಂಜೂರಾಗಿದ್ದು, ಕೆಲಸ ಕಾರ್ಯಗಳನ್ನು ವಿಳಂಬ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಡಿಸೆಂಬರ್ 19ರಂದು ಪ್ರತಿಭಟನೆ ಮಾಡಲು ನಿವೇಶನ ಮತ್ತು ವಸತಿ ರಹಿತರ ಹೋರಾಟ ಸಮಿತಿ ಸಂಸೆ ನಿರ್ಧರಿಸಿದೆ.
ಸಂಸೆ ಗ್ರಾಮ ಸ.ವಂ 265ರಲ್ಲಿ 2019ನೇ ಇಸವಿಯಲ್ಲಿ 12 ಎಕರೆ 10ಗುಂಟೆ ಭೂಮಿ ಮಂಜೂರಾತಿ ಆಗಿದ್ದು, ಇದರಲ್ಲಿ ನಿವೇಶನಕ್ಕೆ 5 ಎಕರೆ, ಆಸ್ಪತ್ರೆಗೆ 3 ಎಕರೆ, ಪೊಲೀಸ್ ವಸತಿ ಗೃಹಕ್ಕೆ 2 ಎಕರೆ, ಸಾರ್ವಜನಿಕ ಸಮುದಾಯ ಮಂದಿರಕ್ಕೆ 20 ಗುಂಟೆ, ಗ್ರಂಥಾಲಯಕ್ಕೆ 10ಗುಂಟೆ, ಪಂಚಾಯಿತಿ ಕಚೇರಿಗೆ 1 ಎಕರೆ, ಅಭಿವೃದ್ಧಿ ಅಧಿಕಾರಿ ವಸತಿ 10 ಗುಂಟೆ ಭೂಮಿಯನ್ನು ಮೀಸಲಿರಿಸಲಾಗಿದೆ.
ಆದರೆ ಭೂಮಿ ಮಂಜೂರಾತಿ ಆಗಿ ಮೂರು ವರ್ಷ ಕಳೆದರೂ ಕೂಡ ಕೆಲಸ ಕಾರ್ಯಗಳನ್ನು ಮಾಡಲು ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ. ಆದ್ದರಿಂದ ಮಂಜೂರಾತಿ ಆಗಿರುವ ಭೂಮಿಯಲ್ಲಿ ಟೆಂಟ್ ಹಾಕಿ ಪ್ರತಿಭಟನೆ ಮಾಡುವ ಬಗ್ಗೆ ಹೋರಾಟ ಸಮಿತಿಯ ಮುಖಂಡ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.