ಕಳಸ ಲೈವ್ ವರದಿ
ಕಳಸ-ಹೊರನಾಡು ರಸ್ತೆಯಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ ಕಳಪೆ ಎಂದು ದೂರಿ, ಹಾಕಿದ ಡಾಂಬರನ್ನು ಕಿತ್ತು ಹಾಕಿಸುವಲ್ಲಿ ವಿವಿಧ ಪಕ್ಷಗಳ ಮುಖಂಡರು ಸಫಲರಾದರು.
90 ಲಕ್ಷ ರೂಪಾಯಿ ವೆಚ್ಚದ ಈ ರಸ್ತೆಗೆ ಒಂದೆರಡು ದಿನಗಳ ಹಿಂದೆಯಷ್ಟೆ ಡಾಂಬರು ಹಾಕಲಾಗಿತ್ತು. ಆದರೆ ಡಾಂಬರು ಹಾಕಿದ ಕೂಡಲೇ ಕಳಪೆ ಕಾಮಗಾರಿಯ ಬಗ್ಗೆ ಅಪಸ್ವರಗಳು ಕೇಳಿ ಬರುತ್ತಿತ್ತು.
ಈ ಹಿನ್ನಲೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ವೀರೇಂದ್ರ, ಜೆಡಿಎಸ್ ರಾಜ್ಯ ಘಟಕದ ಕಾರ್ಯದರ್ಶಿ ಜ್ವಾಲನಯ್ಯ, ಬಿಜೆಪಿ ಮುಖಂಡ ಶೇಷಗಿರಿ, ಕಾಂಗ್ರೆಸ್ ಮುಖಂಡರಾದ ಅಬ್ದುಲ್ ಶುಕುರು, ಕೆ.ಸಿ ಮಹೇಶ್, ಮುಖಂಡ ರವಿ ರೈ ಹಾಗೂ ಸಾಮಾಜಿಕ ಕಾರ್ಯಕರ್ತ ಟಿಟೂ ಥಾಮಸ್ ಸ್ಥಳಕ್ಕೆ ಬಂದು ಅಸಮಾಧಾನ ತೋರಿದರು.
ಡಾಂಬರು ಹಾಕಿದ ಮರುದಿನನೇ ಎದ್ದು ಬರುತ್ತಿದ್ದ ಹಿನ್ನಲೆಯಲ್ಲಿ ಹಾಕಿದ ಡಾಂಬರು ಕಳಪೆ ಆಗಿದ್ದು, ಡಾಂಬರು ಕಿತ್ತು ಬರುತ್ತಿದೆ ಎಂದು ಸ್ಥಳೀಯರು ದೂರಿದ್ದರು. ಕಾಲಿನಿಂದ ಒತ್ತಿದಾಗ ಡಾಂಬರು ಮಿಶ್ರಿತ ಜಲ್ಲಿ ಕಿತ್ತು ಬರುತ್ತಿತ್ತು. ಇದನ್ನು ಕಂಡು ಇತರೆ ಗ್ರಾಮಸ್ಥರು ಕೂಡ ಕೆಲಸದ ಗುಣಮಟ್ಟದ ಬಗ್ಗೆ ಆಕ್ರೋಶ ಹೊರಹಾಕಿದರು.
ಡಾಂಬರಿನ ಪ್ರಮಾಣ ಕಡಿಮೆ ಮಾಡಿದ್ದರಿಂದ ರಸ್ತೆ ಕಿತ್ತು ಬರುತ್ತಿದೆ. ನಿಗದಿತ ಪ್ರಮಾಣಕ್ಕಿಂತ ತೆಳ್ಳಗೆ ರಸ್ತೆ ಮಾಡಲಾಗುತ್ತಿದೆ. ಗುಣಮಟ್ಟದ ಕೆಲಸ ಮಾಡಲು ಅಗತ್ಯ ಉಪಕರಣ ಇಲ್ಲದೆ ಕಾಮಗಾರಿ ನಡೆಸಲಾಗುತ್ತಿದೆ. ನೆಲವನ್ನು ಸರಿಯಾಗಿ ಸ್ವಚ್ಛಗೊಳಿಸದೆ ಡಾಂಬರು ಮಿಶ್ರಣ ಬಳಸಲಾಗಿದೆ ಎಂದು ಗ್ರಾಮಸ್ಥರು ಆರೋಪಗಳ ಸುರಿಮಳೆ ಮಾಡಿದರು.
ಸ್ಥಳಕ್ಕೆ ಬಂದ ಲೋಕೋಪಯೋಗಿ ಇಲಾಖೆ ಎಂಜಿನಿಯರ್ಗಳಾದ ಮಂಜುನಾಥ್ ಮತ್ತು ಸತೀಶ್ ಅವರನ್ನು ಮುಖಂಡರು ತರಾಟೆಗೆ ತೆಗೆದುಕೊಂಡರು.
ಮಳೆಯಿಂದಾಗಿ ಡಾಂಬರು ಕಿತ್ತು ಬಂದಿದೆ.ಅದನ್ನು ಕಿತ್ತು ತೆಗೆದು ಹೊಸದಾಗಿ ಡಾಂಬರು ಹಾಕುತ್ತೇವೆ ಎಂದು ಭರವಸೆ ನೀಡಿ ಸಂಜೆಯಾಗುತ್ತಿದ್ದಂತೆ 200 ಮೀ ಉದ್ದ ರಸ್ತೆಗೆ ಹಾಕಿದ ಡಾಂಬರನ್ನು ಕಿತ್ತು ತೆಗೆದರು.