ಕಳಸ ಲೈವ್ ವರದಿ
ಕಳಸ ತಾಲ್ಲೂಕು ಮರಸಣಿಗೆ ಗ್ರಾಮದ ಆನೆಕಾಡು ಖಾಂಡ್ಯ ಬುಡಕಟ್ಟು ಜನಾಂಗದ 20 ಕುಟುಂಬಗಳಿಗೆ ಹೋಗುವ ರಸ್ತೆಗೆÉ ಎರಡು ವರ್ಷಗಳ ಹಿಂದೆ ಸ್ಥಳಿಯ ಖಾಸಾಗಿ ಎಸ್ಟೇಟ್ ನವರು ಕಬ್ಬಿಣದ ಗೇಟ್ ಅಳವಡಿಸಿರುವ ಪ್ರಕರಣ ಮತ್ತೆ ಚಿಗುರೊಡೆದಿದೆ.
20 ಕುಟುಂಬಗಳಿರುವ ಆನೆಕಾಡು ಖಾಂಡ್ಯ ಗ್ರಾಮದಲ್ಲಿ ಎಲ್ಲರೂ ಗಿರಿಜನ ಕುಟುಂಬಕ್ಕೆ ಸೇರಿದವರು. ಈ ಕುಟುಂಬಗಳು ಅನಾಧಿ ಕಾಲದಿಂದಲೂ ಖಾಂಡ್ಯ ಪ್ರದೇಶದಲ್ಲಿ ಜಮೀನು ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಈ ಕುಟುಂಬಗಳು ಖಾಸಾಗಿ ಚಹ ತೋಟದ ಮಧ್ಯೆ ಹಾದು ಹೋಗುವ ಎರಡೂವರೆ ಕಿ.ಮೀ ದೂರದ ರಸ್ತೆಯ ಮುಖಾಂತರ ಅನಾಧಿಕಾಲದಿಂದಲೂ ವಾಹನಗಳು, ಶಾಲಾ ಮಕ್ಕಳು, ಅಂಬುಲೆನ್ಸ್ ಗಳು, ದಿನ ನಿತ್ಯದ ಸಾಮಾಗ್ರಿಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಗ್ರಾಮಸ್ಥರಿಗೆ ಯಾವುದೇ ರೀತಿಯ ತೊಂದರೆಗಳನ್ನು ನೀಡುತ್ತಿರಲಿಲ್ಲ. ಆದರೆ 2020ರಲ್ಲಿ ಕರೋನದ ನೆಪವೊಡ್ಡಿ ಎಸ್ಟೇಟ್ ಮಾಲಿಕರು ಖಾಂಡ್ಯ ಹೋಗುವ ರಸ್ತೆಗೆ ಕಬ್ಬಿನ ಗೇಟ್ ಅಳವಡಿಸಿದರು. ಈ ಬಗ್ಗೆ ಗ್ರಾಮಸ್ಥರು ತಕರಾರು ತೆಗೆದಿದ್ದರು.
ಆ ಸಂದರ್ಭದಲ್ಲಿ ಸಂಬಂದಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ ಕೂಡ ಯಾವುದೇ ರೀತಿಯ ಪರಿಣಾಮ ಬೀರದೆ ಗ್ರಾಮಸ್ಥರು ಸಾಕಷ್ಟು ತೊಂದರೆಯನ್ನು ಅನುಭವಿಸಿದ್ದರು.
ಈಗ ಇದೇ ವಿಚಾರ ಮತ್ತೆ ಚಿಗುರೊಡೆದಿದ್ದು, ಇದೇ ತಿಂಗಳ 14ರಂದು ವಿವಾದಿತ ಜಾಗದ ಸ್ಥಳ ತನಿಖೆ ಮಾಡಿ, ಕಬ್ಬಿಣದ ಗೇಟ್ ಅಳವಡಿಸಿರುವ ಪ್ರದೇಶವು ಹಿಡುವಳಿಯೇ ಅಥವಾ ಸರ್ಕಾರಿ ಜಾಗವೇ ಎಂಬ ಬಗ್ಗೆ ನಕ್ಷೆಯೊಂದಿಗೆ ವರದಿಯನ್ನು ನೀಡಲು ಕಳಸ ತಾಲ್ಲೂಕು ತಹಶಿಲ್ದಾರ್ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ಮೂಡಿಗೆರೆ ಪತ್ರ ಬರೆದಿದ್ದಾರೆ.
ಇದರಿಂದ ಆನೆಕಾಡು ಖಾಂಡ್ಯ ಗ್ರಾಮಸ್ಥರಿಗೆ ತಮ್ಮ ಗ್ರಾಮಕ್ಕೆ ಹೋಗುವ ರಸ್ಥೆಯ ವಿವಾದ ಸರಿಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.