ಕಳಸ ಲೈವ್ ವರದಿ
ರಾಜ್ಯದ ಎಲ್ಲರಿಗೂ, ಎಲ್ಲ ಬಗೆಯ ಆರೋಗ್ಯ ಸೇವೆ ಉಚಿತವಾಗಿ ಸಿಗಬೇಕು ಮತ್ತು ಬಡ ರೈತರ ಮಕ್ಕಳಿಗೂ ಉನ್ನತ ಶಿಕ್ಷಣ ಸಿಗುವಂತೆ ಕಾಯ್ದೆ ರೂಪಿಸುವ ಬಗ್ಗೆ ಪಕ್ಷದ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಬೇಕು ಎಂದು ಜೆಡಿಎಸ್ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಕಳಸದ ಹೆಚ್.ಡಿ.ಜ್ವಾಲನಯ್ಯ ಆಗ್ರಹಿಸಿದರು.
ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲ ಊರುಗಳಲ್ಲಿ ಆಸ್ಪತ್ರೆಗಳು ಇದ್ದರೂ ವೈದ್ಯರು ಇಲ್ಲ. ಗ್ರಾಮೀಣ ಪ್ರದೇಶದಲ್ಲಿ ಸಿರಿವಂತರ ಮಕ್ಕಳು ವೈದ್ಯಕೀಯ ಸೇವೆ ಮಾಡಲು ಇಚ್ಛಿಸುತ್ತಿಲ್ಲ. ಆದ್ದರಿಂದ ವೈದ್ಯಕೀಯ ಶಿಕ್ಷಣಕ್ಕೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಮೀಸಲಾತಿ ಕೊಟ್ಟು ಗ್ರಾಮೀಣ ಪ್ರದೇಶದಲ್ಲೇ ಕಡ್ಡಾಯ ಸೇವೆ ಸಲ್ಲಿಸುವಂತೆ ಅವಕಾಶ ಮಾಡಬೇಕು ಎಂದರು.
ಹಾಗೆಯೇ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಆಯಾ ಜಿಲ್ಲೆಗೆ ಹೊಂದಿಕೊಳ್ಳುವ ಕೈಗಾರಿಕೆಗಳನ್ನು ಸ್ಥಾಪಿಸಲು ಸರ್ಕಾರನೆರವಾಗಬೇಕು.ಉದ್ಯಮಿಗಳಿಗೆ ಭೂಮಿ, ನೀರು, ವಿದ್ಯುತ್ ಪೂರೈಸಿ ಸ್ಥಳೀಯರಿಗೆ ಉದ್ಯೋಗ ಕೊಡುವಂತೆ ತಾಕೀತು ಮಾಡಬೇಕು.ಇದರಿಂದ ಸ್ಥಳಿಯರು ದೊಡ್ಡ ಪಟ್ಟಣಗಳಿಗೆ ವಲಸೆ ಹೋಗುವ ಸಂದರ್ಭ ತಪ್ಪುತ್ತದೆ ಎಂದೂ ಜ್ವಾಲನಯ್ಯ ಪಕ್ಷದ ಮುಖಂಡರ ಗಮನ ಸೆಳೆದರು.
ತನ್ನನ್ನು ರಾಜ್ಯ ಕಾರ್ಯಕಾರಿ ಸಮಿತಿಗೆ ಆಯ್ಕೆ ಮಾಡಿದ್ದಕ್ಕೆ ಕೃತಜ್ಷತೆ ಸಲ್ಲಿಸಿದ ಅವರು, ಜಿಲ್ಲೆಯಲ್ಲಿ ಪಕ್ಷದ ಸಂಘಟನೆ ಚುರುಕಾಗಿದೆ, ತಾಲ್ಲೂಕು-ಜಿಲ್ಲಾ ಅಧ್ಯಕ್ಷರು ಸಂಘಟಿತರಾಗಿದ್ದಾರೆ.ಇಡೀ ರಾಜ್ಯದಲ್ಲಿ ಚುನಾವಣಾ ಪ್ರಚಾರಕ್ಕೆ ನಾನು ಹೆಗಲು ಕೊಡಲು ಸಿದ್ಧನಿದ್ದೇನೆ ಎಂದು ಹೇಳಿದರು.
ನನಗೆ ಈ ಜವಾಬ್ದಾರಿ ನೀಡಿದ ಜೆಡಿಎಸ್ ವರಿಷ್ಟರಾದ ದೇವೇಗೌಡ, ಕುಮಾರಸ್ವಾಮಿ, ರೇವಣ್ಣ, ಸಿ.ಎಂ.ಇಬ್ರಾಹಿಂ, ತಿಪ್ಪೆಸ್ವಾಮಿ ಅವರಿಗೆ ವಿಶೇಷ ವಂದನೆ ಎಂದು ಜ್ವಾಲನಯ್ಯ ತಿಳಿಸಿದರು.
ಭದ್ರಾ ಮೇಲ್ದಂಡೆ ಯೋಜನೆ, ಇನಾಂ ಭೂಮಿ ಸಮಸ್ಯೆ, ಕಳಸ ತಾಲ್ಲೂಕು ವಿಚಾರದಲ್ಲಿ ಜೆಡಿಎಸ್ ಕೊಡುಗೆಯನ್ನು ಕಳಸ ತಾಲ್ಲೂಕಿನ ಜನತೆ ಮರೆತಿಲ್ಲ.ಮುಂದಿನ ಚುನಾವಣೆಯಲ್ಲಿ ನಿಂಗಯ್ಯ ಅವರನ್ನು ಶಾಸಕರಾಗಿ ಗೆಲ್ಲಿಸುತ್ತೆವೆ ಎಂದೂ ಜ್ವಾಲನಯ್ಯ ಭರವಸೆ ನೀಡಿದರು.