ಕಳಸ ಲೈವ್ ವರದಿ
ಪ್ರತಿಯೊಬ್ಬರಿಗೂ ದೈನಂದಿನ ಜೀವನಕ್ಕೆ ಅನ್ವಯವಾಗುವ ಸಾಮಾನ್ಯ ಕಾನೂನು ಕುರಿತು ಮಾಹಿತಿ, ಅರಿವು ಇರಬೇಕು ಎಂದು ಮೂಡಿಗೆರೆ ಜೆಎಫ್ಎಂಸಿ ನ್ಯಾಯಾಧೀಶರಾದ ಎ.ವಿಶ್ವನಾಥ್ ಹೇಳಿದರು.
ಇಲ್ಲಿನ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಕಾನೂನು ಸೇವಾ ಪ್ರಾಧಿಕಾರ ಮತ್ತು ವಕೀಲರ ಸಂಘದ ಆಶ್ರಯದಲ್ಲಿ ಕಾನೂನು ಸಾಕ್ಷರತಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು ಸರ್ಕಾರದ ವಿವಿಧ ಸೌಲಭ್ಯ ಪಡೆಯಲು ಹಾಗೂ ಆಸ್ತಿ ಮಾರಾಟ ಮತ್ತು ಖರೀದಿ, ಜನನ, ಮರಣ, ಕಂದಾಯ ಇಲಾಖೆ ಕೆಲಸ ಕಾರ್ಯಗಳ ಕುರಿತು ಕನಿಷ್ಠ ತಿಳುವಳಿಕೆ ಇರಬೇಕು.ಕಾನೂನಿನ ಅರಿವು ಇಲ್ಲ ಎಂದು ಸಮಾಜದಲ್ಲಿ ಯಾರೂ ತಮಗೆ ಸಿಗಬೇಕದ ಹಕ್ಕು ಮತ್ತು ನ್ಯಾಯದಿಂದ ವಂಚಿತರಾಗಬಾರದು. ಅದಕ್ಕಾಗಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಮೂಡಿಸಲು ಜನರ ಮನೆ ಬಾಗಿಲಿಗೆ ಹೋಗಿ ಅರಿವು ಮೂಡಿಸುವ ಮಾಡುತ್ತಿದೆ. ಜನರು ಇದನ್ನು ಸದುಪಯೋಗ ಮಡಿಕೊಂಡು ಕಾನೂನಿನ ಅರಿವು ಪಡೆದುಕೊಳ್ಳಬೆಕು ಎಂದು ತಿಳಿಸಿದರು.
ವಕೀಲ ಅಶೋಕ್ ಮಾತನಾಡಿ, ಕಾನೂನು ಸೇವಾ ಪ್ರಾಧಿಕಾರದಿಂದ ಜನಸಾಮಾನ್ಯರಿಗೆ ಸಿಗುವ ಕಾನೂನು ಸೇವೆ ಬಗ್ಗೆ ತಿಳಿಸಿದರು. ಉಚಿತ ಕಾನೂನು ಸಲಹೆ ಪಡೆಯಲು ಮೊಬೈಲ್ ಆಪ್ ನೆರವಾಗುತ್ತದೆ ಎಂದರು.
ವಕೀಲ ಜಿ.ಬಿ. ವೆಂಕಟೇಶ್, ಮರಣ ಶಾಸನ ಬರೆಯುವ ಬಗ್ಗೆ ಅದರ ಕಾನೂನಿನ ವ್ಯಾಪ್ತಿ ಬಗ್ಗೆ ತಿಳಿಸಿದರು.
ಕಳಸ ಪಂಚಾಯಿತಿ ಅಧ್ಯಕ್ಷೆ ಸುಜಯಾ ಅಧ್ಯಕ್ಷತೆ ವಹಿಸಿದ್ದರು. ಪಿಡಿಓ ಕವೀಶ್, ವಿವಿಧ ಪಂಚಾಯತಿ ಅಧ್ಯಕ್ಷರು, ಸದಸ್ಯರು ಇದ್ದರು.