ಕಳಸ ಲೈವ್ ವರದಿ
ಪಟ್ಟಣದ ಮಹಾವೀರ ವೃತ್ತದಿಂದ ಸರ್ಕಾರಿ ಪ್ರೌಢ ಶಾಲೆವರೆಗಿನ ಹೊರನಾಡು ರಸ್ತೆ ದುರಸ್ತಿ ವಿಳಂಬ ಆಗುತ್ತಿರುವುದನ್ನು ಖಂಡಿಸಿ ಸ್ಥಳೀಯರು ನವಂಬರ್ ಏಳರಂದು ಕಳಸ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ.
15 ದಿನಗಳ ಹಿಂದೆ ಈ ರಸ್ತೆಗೆ ಜಲ್ಲಿ ಹರಡಿದ ನಂತರ ಕಾಮಗಾರಿ ನಿಂತುಹೋಗಿದೆ. ಇದರಿಂದ ರಸ್ತೆಯಲ್ಲಿ ಧೂಳು ತುಂಬಿ ಆಸುಪಾಸಿನ ನಿವಾಸಿಗಳ ಆರೋಗ್ಯ ಹದಗೆಡುತ್ತಿದೆ ಎಂಬ ದೂರು ಕೇಳಿ ಬಂದಿದೆ. ಇದೆ ರಸ್ತೆಯ ಮುಖಾಂತರ ಕೆಪಿಎಸ್ ಶಾಲೆ, ಪದವಿ ಪೂರ್ವ ಕಾಲೇಜು, ಪ್ರಥಮ ದರ್ಜೆ ಕಾಲೇಜುಗಳಿದ್ದು, ವಾಹನಗಳು ಹೋಗುವಾಗ ಅದರ ಚಕ್ರಕ್ಕೆ ಜಲ್ಲಿ ಕಲ್ಲು ಸಿಕ್ಕಿ ಮಕ್ಕಳು ಪೆಟ್ಟು ಮಾಡಿಕೊಳ್ಳುತ್ತಿದ್ದಾರೆ. ರಸ್ತೆಯಿಡೀ ಹರಡಿರುವ ಜಲ್ಲಿ ಯಿಂದ ಬೈಕ್ ಸವಾರರು ಬಿದ್ದು ಎದ್ದು ಹೋಗುವ ಪರಿಸ್ಥಿತಿಯಾಗಿದೆ. ಹೊರನಾಡು ಹೋಗುವ ಪ್ರವಾಸಿಗರು ತೊಂದರೆ ಅನುಭವಿಸುತ್ತಿದ್ದಾರೆ.
ಕೂಡಲೇ ರಸ್ತೆ ಕಾಮಗಾರಿ ನಡೆಸಬೇಕು. ಇಲ್ಲದಿದ್ದರೆ ಇದೇ 7ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರ ಪರವಾಗಿ ಟಿಟ್ಟು ಥಾಮಸ್ ಎಚ್ಚರಿಕೆ ನೀಡಿದ್ದಾರೆ.