ಕಳಸ ಲೈವ್ ವರದಿ
ಇಲ್ಲಿಯ ಕಲಶೇಶ್ವರ ಸ್ವಾಮಿಯವರಿಗೆ ನಡೆಯುವ ಗಿರಿಜಾ ಕಲ್ಯಾಣೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಗುರುವಾರ ಧ್ವಜಾರೋಹಣ ನಡೆಯಿತು.
ಮಂಗಳವಾರ ಗಣಪತಿ ಪೂಜೆಯೊಂದಿಗೆ ಪ್ರಾರಂಭವಾದ ಕಲ್ಯಾಣೋತ್ಸವದ ಧಾರ್ಮಿಕ ಕಾರ್ಯಕ್ರಮದಲ್ಲಿ ಅಂಕುರಾರ್ಪಣೆ, ಕೌತುಕೋತ್ಸವ ಕಾರ್ಯಕ್ರಮಗಳು ನಡೆದವು.
ಗುರುವಾರ ಮಧ್ಯಾಹ್ನ ಧ್ವಜಾರೋಹಣ ನಡೆದು ನಂತರದಲ್ಲಿ ರಾತ್ರಿ ಗ್ರಾಮಸ್ಥರಿಂದ ಹಸಿರುವಾಣಿ ಸಮರ್ಪಣೆ, ರಾತ್ರಿ ಕಾರ್ತಿಕ ದೀಪೋತ್ಸವ, ಸುಪ್ರದಕ್ಷಿಣೆ ಸೇವೆ ನಡೆಯಲಿದೆ.
ಶುಕ್ರವಾರ ಶತವಾರ ರುದ್ರಾಭಿಷೇಕ,ರಂಗಪೂಜೆ, ರಾತ್ರಿ ಕ್ಷೀರಾಬ್ಧಿ ಮಹೋತ್ಸವ, ತುಳಸಿ ಪೂಜೆ, ಸುಪ್ರದಕ್ಷಿಣೆ ಸೇವೆ ನಡೆದು ರಾತ್ರಿ 3 ಗಂಟೆಗೆ ಗಿರಿಜಾ ಕಲ್ಯಾಣೋತ್ಸವ ಕಾರ್ಯಕ್ರಮ ನಡೆಯಲಿದೆ.
ಈಗಾಗಲೇ ಗಿರಿಜಾ ಕಲ್ಯಾಣ ನಿಮಿತ್ತ ಕಲಶೇಶ್ವರ ದೇವಸ್ಥಾನವನ್ನು ವಿದ್ಯುದ್ವೀಪ, ತಳಿರು ತೋರಣಗಳಿಂದ ಶೃಂಗರಿಸಲಾಗಿದೆ.
ಶಿವನು ಕಲ್ಯಾಣಕ್ಕಾಗಿಯೇ ಕಳಸದಲ್ಲಿ ನೆಲೆ ನಿಂತ ಕಾರಣ ಕಲಶೇಶ್ವರನಿಗೆ ಗಿರಿಜಾ ಕಲ್ಯಾಣವೇ ಶ್ರೇಷ್ಟವಾದ ಉತ್ಸವವಾಗಿದೆ. ಉತ್ತರಾಯಣವು ಹಗಲೆಂದೂ,ದಕ್ಷಿಣಾಯವೂ ರಾತ್ರಿಯೆಂದು ಕಾಲಮಾನವಿರುವ ದೇವತೆಗಳ ಲೆಕ್ಕಾಚಾರದಲ್ಲಿ ಇಲ್ಲಿ ನಡೆವ ಕಲ್ಯಾಣೋತ್ಸವವು ನಿತ್ಯಕಲ್ಯಾಣವಾಗಿರುತ್ತದೆ.ಕಾರ್ತಿಕ ಶುದ್ದ ಏಕಾದಶಿಯಂದು ರಾತ್ರಿ ಎಪ್ಪತ್ತೆರಡು ಘಳಿಗೆಗೆ ಕನ್ಯಾಲಗ್ನ ಎಂದು ಬ್ರಹ್ಮದೇವನು ನಿಶ್ವಯಿಸಿರುವುದರಿಂದ ಈಗಲೂ ಅದರಂತೆ ನಡೆಯುತ್ತಿದೆ.