ಕಳಸ ಲೈವ್ ವರದಿ
ಕಳಸದಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ಮೆರವಣಿಗೆಯಲ್ಲಿ ಪುನೀತ್ ರಾಜ್ಕುಮಾರ್ ಗೆ ಅವಮಾನ ಮಾಡಿಲ್ಲ, ಇದು ಸತ್ಯಕ್ಕೆ ದೂರವಾಗಿದ್ದು ಎಂದು ಭಾರತೀಯ ಜನತಾ ಪಾರ್ಟಿ ಕಳಸ ಮಹಾಶಕ್ತಿ ಕೇಂದ್ರ ಕಳಸ ಸ್ಪಷ್ಟ ಪಡಿಸಿದೆ.
ಪಕ್ಷದ ಕಚೇರಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಭಾರತೀಯ ಜನತಾ ಪಾರ್ಟಿ ಮಹಾಶಕ್ತಿ ಕೇಂದ್ರ ಕಳಸದ ಅಧ್ಯಕ್ಷ ನಾಗಭೂಷನ್, ಕಳಸದಲ್ಲಿ ನಡೆದ ರಾಜ್ಯೋತ್ಸವದಂದು ಕಳಸ ಪಬ್ಲಿಕ್ ಶಾಲೆಯ ರಾಜ್ಯೋತ್ಸವದ ಮಕ್ಕಳ ಮೆರವಣಿಗೆಯಲ್ಲಿ ಆದ ಒಂದು ಸಣ್ಣ ಘಟನೆಯನ್ನು ಪುನೀತ್ ರಾಜ್ಕುಮಾರ್ ಗೆ ಮಾಡಲಾದ ಅಗೌರವ ಎಂದು ಬಿಂಬಿಸಿರುವುದು ನಮಗೆಲ್ಲ ಅತೀವ ನೋವುಂಟು ಮಾಡಿದೆ.
ನಮ್ಮ ಪಕ್ಷದ ಮುಖಂಡರಾದ ಕೆ.ಎ.ರಂಗನಾಥ್ ರವರು ಕೆಪಿಎಸ್ ಶಾಲೆಯ ಉಪಾಧ್ಯಕ್ಷರಾಗಿದ್ದು, ಈ ಘಟನೆ ನಡೆಯುವ ಸಂದರ್ಭದಲ್ಲಿ ಕೆಪಿಎಸ್ ಶಾಲೆಯ ಹೆಣ್ಣು ಮಕ್ಕಳ ಸುರಕ್ಷತೆಯ ದೃಷ್ಠಿಯಿಂದ ಹಾಗೂ ಮೆರವಣಿಗೆಯ ನೀತಿ ಸಂಹಿತೆಯಂತೆ ರಾಜು ಎಂಬುವವರು ಹೆಣ್ಣು ಮಕ್ಕಳ ಸಾಲಿನ ಮಧ್ಯದಲ್ಲಿದ್ದುದರಿಂದ ಮಕ್ಕಳ ಸಾಲಿನ ನಂತರ ಬರುವಂತೆ ವಿನಂತಿಸಿದರು. ಆದರೆ ಇದನ್ನು ತಪ್ಪಾಗಿ ಅರ್ಥೈಸಿಕೊಂಡು ರಾಜುರವರು ಈ ವಿಚಾರವನ್ನು ವಯಕ್ತಿಕವಾಗಿ ತೆಗೆದುಕೊಂಡು ಕೆ.ಎ.ರಂಗನಾಥ್ ರವರ ತೇಜೋವಧೆ ಮಾಡುವ ಉದ್ದೇಶದಿಂದಲೇ ಮಾಧ್ಯಮಗಳಿಗೆ ತಪ್ಪು ಮಾಹಿತಿ ನೀಡಿರುತ್ತಾರೆ. ಹಾಗೂ ರಾಜುರವರು ರಾಜ್ಯೋತ್ಸವದ ಸ್ತಬ್ಧ ಚಿತ್ರ ಹಿಡಿದುಕೊಂಡು ಹೋಗುವ ಬಗ್ಗೆ ಹಾಗೂ ಭಾಗವಹಿಸುವ ಬಗ್ಗೆ ಶಾಲಾ ಆಡಳಿತ ಮಂಡಳಿಗೆ ಯಾವುದೇ ಮಾಹಿತಿ ನೀಡಿರುವುದಿಲ್ಲ ಮತ್ತು ಅನುಮತಿ ಪಡೆದಿರುವುದಿಲ್ಲ.
ಇಷ್ಟೆಲ್ಲ ತಪ್ಪುಗಳ ಮಧ್ಯದಲ್ಲಿ ಭಾರತೀಯ ಜನತಾ ಪಾರ್ಟಿಯ ಮುಖಂಡರು ಪುನೀತ್ ರಾಜ್ಕುಮಾರ್ರವರನ್ನು ಅವಮಾನಿದರು ಅಗೌರವಿಸಿದರು ಎಂಬುದು ಖೇದಕರ ವಿಷಯ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಎಂ.ಎ.ಶೇಷಗಿರಿ, ರಂಗನಾಥ್, ಸುಜಯ ಸದಾನಂದ, ಕಾರ್ತಿಕ್ ಶಾಸ್ತ್ರಿ, ಪ್ರಸಿದ್ದ ಜೈನ್, ಭಾನೇಶ್, ರವಿಚಂದ್ರ ಇದ್ದರು.