ಕಳಸ ಲೈವ್ ವರದಿ
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶದ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತು, ಕಳಸ ತಾಲೂಕು ಘಟಕದ ಅಧ್ಯಕ್ಷ ಅ.ರಾ.ಸತೀಶ್ಚಂದ್ರ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ “ಕನ್ನಡದ ಬಾವುಟವು ಶಾಂತಿ ಸೌಹಾರ್ದತೆಯ ಸಂಕೇತವಾಗಿದ್ದು, ಕನ್ನಡತನವನ್ನು ಹೆಮ್ಮೆಯಿಂದ ಜಗತ್ತಿನೆದುರು ಆನಾವರಣಗೊಳಿಸುತ್ತದೆ” ಎಂದು ತಿಳಿಸಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ರಮ್ಯ ಎಚ್.ಬಿ. ಕನ್ನಡ ರಾಜ್ಯೋತ್ಸವದ ಆಚರಣೆಯ ಪ್ರಸ್ತುತತೆ ಹಾಗೂ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕøತಿಯ ಹಿರಿಮೆಯ ಬಗೆಗೆ ವಿಸ್ತಾರವಾದ ಚಿತ್ರಣ ನೀಡಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥ ಡಾ. ಆದಿತ್ಯ ಅಡಿಗ ಎ.ಜಿ ಮಾತನಾಡಿ “ಜಗತ್ತಿನಲ್ಲಿ ಭಾಷಾ ವಿಜ್ಞಾನದ ದೃಷ್ಠಿಕೋನದಿಂದ ಕನ್ನಡದ ಸ್ಥಾನಮಾನವನ್ನು ವಿವರಿಸಿದ್ದಲ್ಲದೇ ಕನ್ನಡದ ಲಿಪಿ, ವ್ಯಾಕರಣ, ಶಬ್ಧ ಶ್ರೀಮಂತಿಕೆ ಮುಂತಾದವುಗಳನ್ನು ಕುರಿತು ಅನ್ಯ ಭಾಷೆಗಳೊಂದಿಗೆ ತೌಲನಿಕ ಅಧ್ಯಯನದ ಫಲಿತಾಂಶವನ್ನು ವಿವರಿಸಿ ಕನ್ನಡ ಭಾಷೆಯ ಪರಿಪೂರ್ಣತೆಯ ಬಗೆಗೆ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಕೊಟ್ಟರು”.
ಅಧ್ಯಕ್ಷೀಯ ನುಡಿಗಳನ್ನಾಡಿದ ಕಾಲೇಜಿನ ಪ್ರಾಂಶುಪಾಲ ವಿನಯ ಕುಮಾರ ಶೆಟ್ಟಿ ಎಸ್ “ಆಧುನಿಕ ಹಾಗೂ ಜಾಗತೀಕರಣದ ಕಾಲಘಟ್ಟದಲ್ಲಿ ಕನ್ನಡ ಬಳಕೆಯ ಅನಿವಾರ್ಯತೆ, ಕೇಂದ್ರ ಸರ್ಕಾರದ ಹುದ್ದೆಗಳಿಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡದಲ್ಲಿ ಉತ್ತರ ಬರೆಯುವ ಅವಕಾಶ ಲಭ್ಯತೆಯ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು”.
ಕಾರ್ಯಕ್ರಮದಲ್ಲಿ ನಾಡಗೀತೆ ಹಾಗೂ ರೈತಗೀತೆಯನ್ನು ಸಾಮೂಹಿಕವಾಗಿ ಹಾಡಲಾಯಿತು. ಕನ್ನಡ ಸಾಹಿತ್ಯ ಪರಿಷತ್ತು, ಹೋಬಳಿ ಘಟಕದ ಅಧ್ಯಕ್ಷ ಶೇಖರ್ ಶೆಟ್ಟಿ, ಗೌರವ ಕಾರ್ಯದರ್ಶಿ ಪ್ರೇಮ್ ಕುಮಾರ್ ಶೆಟ್ಟಿ, ಸಹಾಯಕ ಪ್ರಾಧ್ಯಾಪಕರುಗಳಾದ ವಿಶುಕುಮಾರ್ ಎನ್, ಸೋಮಶೇಖರ ಸಿ.ಎನ್, ಸಂತೋಷ ಕೆ.ಬಿ, ಗ್ರಂಥಪಾಲಕ ನಾಗೇಂದ್ರ ಕೆ, ಉಪನ್ಯಾಸಕರಾದ ಕಾಂತಿ ಪೈ, ಸಚಿನ್ ಕುಮಾರ್ ಜಿ.ಆರ್, ವಿದ್ಯಾರ್ಥಿಗಳಾದ ಸುಕೇಶ್, ಕೌಶಿಕ್, ಅನಂತ ಭಟ್, ಪ್ರತಾಪ್ ಉಪಸ್ಥಿತರಿದ್ದರು.