ಕಳಸ ಲೈವ್ ವರದಿ
ಶ್ರೀ ನೀಲಕಂಠೇಶ್ವರ ದೇವಸ್ಥಾನ ಶ್ರೀ ಜಂಗಮ ಸಂಸ್ಥಾನ ಮಠ ಗುರುಪುರದ ಯಕ್ಷಗಾನ ಚಿಕ್ಕ ಮೇಳ ಕಲಾವಿದರು ಕಳಸ ಪಟ್ಟಣದ ಕೆಲ ಆಯ್ದ ಮನೆಗಳಿಗೆ ತೆರಳಿ ಅಲ್ಲಿ ಯಕ್ಷಗಾನ ಪ್ರದರ್ಶನ ನಡೆಸಿದರು.
ರಾತ್ರಿ 7ರ ನಂತರ 10 ಗಂಟೆಯ ವರೆಗೆ ಕಳಸದ ಕೆಲ ಆಯ್ದ ಮನೆಗಳಿಗೆ ತೆರಳಿ ಅಲ್ಲಿ 15 ನಿಮಿಷಗಳ ಯಾವುದಾದರೂ ಒಂದು ಪ್ರಸಂಗದ ಚಿಕ್ಕ ಬಾಗವನ್ನು ಮನೆಗಳಲ್ಲಿ ಪ್ರದರ್ಶನ ಮಾಡಿದರು.
ಮನೆಗೆ ಬಂದ ಕಲಾ ತಂಡವನ್ನು ಮನೆಯವರು ಸ್ವಾಗತಿಸಿ ಹೂ ಹಣ್ಣು ಅಕ್ಕಿ ತೆಂಗಿನಕಾಯಿ ಮತ್ತು ದೀವ ಇಟ್ಟು ಅಲ್ಲಿ ಪ್ರಾರ್ಥನೆ ಸಲ್ಲಿಸಿ ನಂತರ ಯಕ್ಷಗಾನ ಪ್ರದರ್ಶನ ಮಾಡಿದರು.
ಒಂದು ಸ್ತ್ರೀ ವೇಷ ಇನ್ನೊಂದು ಪುರುಷ ವೇಷ ಧಾರಿ ಮತ್ತು ಹಿಮ್ಮೇಳದ ಇಬ್ಬರು ಕಲಾವಿದರು ತಂಡದಲ್ಲಿದ್ದು, ಪ್ರತಿ ಮನೆಯಲ್ಲಿ ಕಲಾವಿದರಿಗೆ ಕಾಣಿಕೆಯನ್ನೂ ನೀಡಲಾಯಿತು.
ಒಂದೆಡೆ ಕಲಾವಿದರ ಜೀವನ ನಿರ್ವಹಣೆ ಇನ್ನೊಂದೆಡೆ ಕಲಾ ಸೇವೆ ಹೀಗೆ ಚಿಕ್ಕ ಮೇಳ ಯಕ್ಷಗಾನದ ಕಂಪನ್ನು ಮನೆಮನೆಗೆ ಪಸರಿಸಿತು. ಈ ಮೂಲಕ ಮಕ್ಕಳಿಗೆ ಮನೆಮಂದಿಗೆ ಮನರಂಜನೆಯನ್ನೂ ಒದಗಿಸಿ ಯಕ್ಷ ಕಲೆಗೆ ತನ್ನದೇ ಆದ ಕೊಡುಗೆಯನ್ನು ನೀಡಿದರು.