ಕಳಸ ಲೈವ್ ವರದಿ
ಎಲೆ ಚುಕ್ಕೆ ರೋಗವು ಗಾಳಿಯಲ್ಲಿ ರೋಗಾಣು ಬಹಳ ಬೇಗನೆ ಹರಡುತ್ತದೆ.ಹಾಗಾಗಿ ತೀವ್ರ ಬಾಧಿತ ಎಲೆಗಳ ನಾಶ ಮತ್ತು ಶಿಲೀಂಧ್ರನಾಶಕದ ಸೂಕ್ತ ಬಳಕೆ, ಸಮುದಾಯ ಮಟ್ಟದ ರೋಗ ನಿಯಂತ್ರಣ ಕ್ರಮಗಳು ಬಲು ಮುಖ್ಯ ಎಂದು ಕೃಷಿ ವಿಜ್ಞಾನಿ ಡಾ| ಗಿರೀಶ್ ಹೇಳಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕಳಸ ಹಾಗೂ ತೋಟಗಾರಿಕಾ ಇಲಾಖೆ ಮೂಡಿಗೆರೆ ಇವರ ಸಹಯೋಗದಲ್ಲಿ ಅಡಿಕೆ ಎಲೆ ಚುಕ್ಕಿ ರೋಗ ಮತ್ತು ಅಡಿಕೆ ಹಳದಿ ಎಲೆ ರೋಗ ನಿಯಂತ್ರಣದ ಬಗ್ಗೆ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಅಧಿಕ ರೋಗಬಾಧಿತ ಎಲೆಗಳನ್ನು ತುಂಡರಿಸಿ ತೆಗೆದು ನಾಶ ಮಾಡುವುದು ಸೋಂಕು ಕಡಿಮೆಗೊಳಿಸಲು ಪ್ರಯೋಜನಕಾರಿಯಾಗಿದೆ. ರೋಗಬಾಧಿತ ತೋಟಗಳಲ್ಲಿ ಅಡಿಕೆ ಗೊನೆಗಳಿಗೆ ಬೋರ್ಡೋ ಮಿಶ್ರಣ ಸಿಂಪಡಣೆ ಮಾಡುವಾಗ, ಎಲೆಗಳಿಗೂ ಮಾಡಬೇಕು. ಹೆಚ್ಚು ಬಾಧೆಯಿರುವ ತೋಟಗಳಲ್ಲಿ ಮಳೆ ಇಲ್ಲದಾಗ ಪ್ರೋಫಿಕೊನಝೋಲ್ ಶಿಲೀಂದ್ರನಾಶಕವನ್ನು ಎಲೆಗಳಿಗೆ ಸಿಂಪಡಣೆ ಮಾಡಬೇಕು. ತೀವ್ರ ರೋಗಬಾಧೆ ಇರುವಲ್ಲಿ ಜನವರಿ ನಂತರ ಸಿಂಗಾರ ಒಣಗುವ ರೋಗಕ್ಕೆ ಪ್ರೋಪಿಕೊನಝೋಲ್ ಶಿಲೀಂದ್ರನಾಶಕ ಸಿಂಪಡಿಸುವಾಗ ಎಲೆಗಳಿಗೂ ಸಿಂಪಡಿಸಬಹುದು. ರೋಗ ಬಾಧೆ ಇರುವ ಕೆಲವು ತೋಟಗಳಲ್ಲಿ ಪೊಟಾಶಿಯಂ ಅಂಶ ಕಡಿಮೆ ಇರುವುದನ್ನು ಗಮನಿಸಲಾಗಿದೆ. ಮಣ್ಣು ಪರೀಕ್ಷೆ ಆಧಾರದ ಮೇಲೆ ಗೊಬ್ಬರ ನೀಡಬೇಕು ಎಂದು ಹೇಳಿದರು.
ತೋಟಗಾರಿಕಾ ಉಪ ನಿರ್ದೇಶಕ ವೇದಮೂರ್ತಿ ಮಾತನಾಡಿ ರೋಗ ಪೀಡಿದ ತೋಟಗಳಿಗೆ ಈಗಾಗಲೇ ಸರ್ಕಾರದ ಬಳಿ ನೆರವು ಕೇಳಲಾಗಿದೆ. ಪರಿಹಾರವೋ ಅಥವಾ ಅದಕ್ಕೆ ಬೇಕಾದ ಔಷಧಿ ಕೊಡುವುದೋ ಎಂದು ಇನ್ನೂ ನಿರ್ಧಾರವಾಗಲಿಲ್ಲ. ಮತ್ತು ರೋಗದ ನಿಯಂತ್ರಣಕ್ಕಾಗಿ ಇಲಾಖೆಯಿಂದ ರೋಗ ಪೀಡಿತ ತೋಟವನ್ನು ಗೊತ್ತು ಮಾಡಿ ಆ ತೋಟದಲ್ಲಿ ರೋಗದ ನಿರ್ಮೂಲನೆಗೆ ಇಲಾಖೆಯೇ ಪ್ರಯೋಗವನ್ನು ಮಾಡಲಿದೆ ಎಂದರು.
ಈ ಸಂದರ್ಭದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಿ.ಕೆ.ಮಂಜಪ್ಪಯ್ಯ, ಉಪಾಧ್ಯಕ್ಷೆ ಆಶಾಲತಾ ಜೈನ್, ತೋಟಗಾರಿಕ ಹಿರಿಯ ಸಹಾಯಕ ನಿರ್ದೇಶಕ ಜಯದೇವಪ್ಪ, ಬ್ಯಾಂಕ್ ನಿರ್ದೇಶಕರಾದ್ರ. ಅ.ರಾ.ಸತೀಶ್ಚಂದ,್ರ ರಾಜೇಂದ್ರ, ಕೃಷ್ಣಪ್ಪ, ಕೃಷ್ಣ ಮುಖಂಡರಾದ ಬಿ.ಎಲ್.ರಾಮದಾಸ್, ಕೇಶವ ಗೌಡ, ಕೆ.ಸಿ.ಧರಣೇಂದ್ರ, ಎಂ.ಎ. ಶೇಷಗಿರಿ ಇದ್ದರು.