ಕಳಸ ಲೈವ್ ವರದಿ
ತಾಲ್ಲೂಕಿನ ಅಡಿಕೆ ಬೆಳೆಗಾರರನ್ನು ಕಂಗೆಡಿಸಿರುವ ಎಲೆ ಚುಕ್ಕಿ ರೋಗ ಮತ್ತು ಹಳದಿ ಎಲೆ ರೋಗದ ನಿರ್ವಹಣೆ ಬಗ್ಗೆ ಒಂದು ದಿನದ ಕಾರ್ಯಾಗಾರವನ್ನು ಪಟ್ಟಣದಲ್ಲಿ ಇದೇ 12ರಂದು ಆಯೋಜಿಸಲಾಗಿದೆ.
ತೋಟಗಾರಿಕಾ ಇಲಾಖೆ ಸಹಯೋಗದಲ್ಲಿ ಇಲ್ಲಿನ ಪ್ರಾಥಮಿಕ ಕೃಷಿ ಮತ್ತು ಪತ್ತಿನ ಸಹಕಾರ ಸಂಘವು ಈ ಶಿಬಿರ ಆಯೋಜಿಸಿದೆ.ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಗಿರೀಶ್ ಕಾರ್ಯಾಗಾರದಲ್ಲಿ ಭಾಗವಹಿಸಿ ರೈತರಿಗೆ ವೈಜ್ಞಾನಿಕ ಸಲಹೆ ನೀಡಲಿದ್ದಾರೆ.
ಈ ಬಗ್ಗೆ ಕಳಸ ಸಹಕಾರ ಸಂಘದಲ್ಲಿ ಶುಕ್ರವಾರ ನಡೆದ ಸಿದ್ಧತಾ ಸಭೆಯಲ್ಲಿ ಅಧ್ಯಕ್ಷ ಮಂಜಪ್ಪಯ್ಯ ಮಾತನಾಡಿ, ಅಡಿಕೆಯ ಆದಾಯವನ್ನೇ ಕಳಸ ತಾಲ್ಲೂಕಿನ ಆರ್ಥಿಕತೆ ಅವಲಂಬಿಸಿದೆ.ಇದೀಗ ಬೆಳೆಗಾರರು ಹೊಸ ರೋಗಗಳ ಬಗ್ಗೆ ಕಂಗೆಟ್ಟಿದ್ದಾರೆ.ಆದ್ದರಿಂದ ರೋಗಗಳ ನಿರ್ವಹಣೆ ಬಗ್ಗೆ ಸಕಾಲಿಕ ಮತ್ತು ನಿಖರ ಮಾಹಿತಿ ನೀಡುವ ಅಗತ್ಯ ಇದೆ.ಮಾನಸಿಕವಾಗಿ ಕುಗ್ಗಿ ಹೋಗಿರುವ ಬೆಳೆಗಾರರಿಗೆ ಧೈರ್ಯ ತುಂಬುವ ಕೆಲಸವನ್ನು ಎಲ್ಲರೂ ಕೂಡ ಒಗ್ಗೂಡಿ ಮಾಡಬೇಕಾದ ಅಗತ್ಯ ಇದೆ ಎಂದರು.
ಸಹಕಾರ ಸಂಘದ ಉಪಾಧ್ಯಕ್ಷೆ ಆಶಾಲತಾ ಜೈನ್, ನಿರ್ದೇಶಕರಾದ ಅನಿಲ್ ಡಿಸೋಜ, ಸತೀಶ್ ಚಂದ್ರ, ವಿವಿಧ ಸಂಘಟನೆಗಳ ಪ್ರತಿನಿಧಿಗಳಾದ ಜ್ವಾಲನಯ್ಯ,ಬ್ರಹ್ಮದೇವ,ಶೇಷಗಿರಿ, ಸಂಘದ ಕಾರ್ಯನಿರ್ವಹಣಾಧಿಕಾರಿ ಮಹಾಬಲೇಶ್ವರ್,ಬೆಳೆಗಾರರ ಸಂಘದ ಅಧ್ಯಕ್ಷ ಶೈಲೇಶ್, ಕಲ್ಲಾನೆ ನರೇಂದ್ರ ಇದ್ದರು.