ಕಳಸ ಲೈವ್ ವರದಿ
ತಾಲ್ಲೂಕಿನ ಬಾಳೆಹೊಳೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಟ್ಟಡವನ್ನು ತೋಟದೂರು ಗ್ರಾಮ ಪಂಚಾಯಿತಿಗೆ ಹಸ್ತಾಂತರ ಮಾಡಿ ಪದವಿ ಪೂರ್ವ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಕಳೆದ ಕೆಲ ವರ್ಷಗಳಿಂದ ದಾಖಲಾತಿಯ ಕೊರತೆಯಿಂದ ಮುಚ್ಚುಗಡೆಯಾಗಿದ್ದ ಈ ಕಾಲೇಜು ನಿರ್ವಹಣೆ ಇಲ್ಲದೆ ಪಾಳು ಬಿದ್ದಿತ್ತು. ಕಟ್ಟಡದ ಬಾಗಿಲು, ಕಿಟಕಿಯನ್ನು ಮುರಿದು ಹಾಕಲಾಗಿತ್ತು. ಪುಂಡ ಪೋಕುರಿಗಳ ಆಶ್ರಯ ತಾಣವಾಗಿತ್ತು. ಅಕ್ರಮ ಚಟುವಟಿಕೆಯ ಕೇಂದ್ರ ಬಿಂದುವಾಗಿ ಮಾರ್ಪಾಡಾಗಿತ್ತು.
ಈ ಬಗ್ಗೆ ಆಗಸ್ಟ್ 21 ರಂದು ಕಳಸ ಲೈವ್ ವೆಬ್ ಮತ್ತು ಯೂ ಟ್ಯೂಬ್ ನಲ್ಲಿ ವರದಿಯನ್ನು ಮಾಡಿ ಗಮನ ಸೆಳೆದಿತ್ತು. ಅಲ್ಲದೆ ಇದೇ ಸಂದರ್ಭದಲ್ಲಿ ಈ ಕಟ್ಟಡವನ್ನು ಸಾರ್ವಜನಿಕ ಬಳಕೆಗೆ ನೀಡಬೇಕು ಎಂದು ಒತ್ತಾಯವನ್ನು ಮಾಡಿತ್ತು. ಈ ಸಂದರ್ಭದಲ್ಲಿ ತೋಟದೂರು ಗ್ರಾಮ ಪಂಚಾಯಿತಿ ಕೂಡ ಕಾಲೇಜು ಕಟ್ಟಡವನ್ನು ತಾತ್ಕಾಲಿಕವಾಗಿ ಪಂಚಾಯಿತಿ ಕಚೇರಿಯನ್ನಾಗಿ ಮಾಡಲು ನೀಡಬೇಕು ಎಂದು ಶಿಕ್ಷಣ ಇಲಾಖೆಗೆ ಪತ್ರವನ್ನು ಬರೆದಿತ್ತು.
ಇದೀಗ ಇದಕ್ಕೆ ಸ್ಪಂದಿಸಿದ ಪದವಿ ಪೂರ್ವ ಶಿಕ್ಷಣ ಇಲಾಖೆ ಕಾಲೇಜು ಕಟ್ಟಡವನ್ನು ಹಲವು ಷರತ್ತುಗಳೊಂದಿಗೆ ಈ ಕಟ್ಟಡವನ್ನು ತೋಟದೂರು ಗ್ರಾಮ ಪಂಚಾಯಿತಿಗೆ ಬಳಸಿಕೊಳ್ಳಲು ಅನುಮತಿ ನೀಡಿದೆ.