ಕಳೆದ ಒಂದು ವಾರಗಳಿಂದ ಕಳಸ ಪಟ್ಟಣದ ಆಸು ಪಾಸಿನ ಹಳ್ಳಿಗಳಲ್ಲಿ ಎರಡು ಆನೆಗಳು ಬೀಡು ಬಿಟ್ಟಿದ್ದು, ರೈತರ ಸಾಕಷ್ಟು ಕೃಷಿಯನ್ನು ಹಾಳು ಮಾಡಿರುವುದಲ್ಲದೆ, ಗ್ರಾಮಸ್ಥರು ಆತಂಕದಲ್ಲಿಯೇ ದಿನ ಕಳೆಯುವಂತಾಗಿದೆ.
ಕಳೆದ ಕೆಲ ದಿನಗಳ ಹಿಂದೆ ಕಳಸ ಭಾಗಕ್ಕೆ ಲಗ್ಗೆ ಇಟ್ಟ ಎರಡು ಆನೆಗಳು ಕಳೆದ ಒಂದು ವಾರಗಳಿಂದ ನೆಲ್ಲಿಕೋಟ, ಲಲಿತಾದ್ರಿ, ಅತ್ತಿಕುಡಿಗೆ, ಮಾವಿನಕೆರೆ, ಸಾಲಿನ ಮಕ್ಕಿ, ಕೊಂಡದಮನೆ, ದುಗ್ಗಪ್ಪನಕಟ್ಟೆ, ಗೋಡ್ಲುಮನೆ, ಗಣಪತಿಕಟ್ಟ, ಮಾರ್ನಬೈಲು ಗ್ರಾಮಗಳಲ್ಲಿ ಸಂಚರಿಸಿ ಅಡಕೆ, ಬಾಳೆ, ತೆಂಗು ಭತ್ತದ ಗದ್ದೆಗಳಿಗೆ ನುಗ್ಗಿ ಅಪಾರ ಪ್ರಮಾಣದ ಕೃಷಿ ಭೂಮಿಗಳನ್ನು ದ್ವಂಸ ಮಾಡಿವೆ.ಅಲ್ಲದೆ ಕಾಫಿ ತೋಗಳಿಗೆ ನುಗ್ಗಿ ಕಾಫಿ ಗಿಡಗಳನ್ನು ಹಾಳು ಮಾಡಿವೆ.
ಹಗಲು ವೇಳೆ ಕಾಡಿನಲ್ಲಿ ಮರೆ ಮಾಚಿ ಕುಳಿತಿರುವ ಆನೆಗಳು ರಾತ್ರಿಯಾಗುತ್ತಿದ್ದಂತೆ ನಾಡಿಗೆ ಬಂದು ಕೃಷಿ ತೋಟಗಳಿಗೆ ನುಗ್ಗಿ ದಾಂದಲೆ ಎಬ್ಬಿಸುತ್ತಿವೆ.ಇದರಿಂದ ರಾತ್ರಿಯಾಗುತ್ತಿದ್ದಂತೆ ಗ್ರಾಮಸ್ಥರು ಮನೆಯಿಂದ ಹೊರಬರದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ತೋಟದ ಕೆಲಸಗಳಿಗೆ ಕೂಲಿ ಕಾರ್ಮಿಕರು ಕೂಡ ಬರದೆ ಇರುವಂತಾಗಿದೆ.
ಈ ಬಗ್ಗೆ ಅರಣ್ಯ ಅಧಿಕಾರಿಗಳು ರಾತ್ರಿ ಆನೆಗಳನ್ನು ಕಾಡಿಗೆ ಅಟ್ಟಿಸುವ ಕೆಲಸ ಮಾಡುತ್ತಿದ್ದರಾದರೂ, ಕಾಡಿಗೆ ಅಟ್ಟಿಸಿದ ಕೆಲ ಹೊತ್ತಿನಲ್ಲೇ ತೋಟಗಳಲ್ಲಿ ಮತ್ತೆ ಆನೆಗಳು ಕಾಣಿಸಿಕೊಳ್ಳುತ್ತಿದೆ.
ಈ ಬಗ್ಗೆ ಬುಧವಾರ ಗಣಪತಿ ಕಟ್ಟೆ, ಗೋಡ್ಲುಮನೆ, ಮಾಗಲು ಕೊಂಡದಮನೆ ಗ್ರಾಮಸ್ಥರು ಆನೆಯ ಉಪಟಲದಿಂದ ನಮ್ಮನ್ನು ರಕ್ಷಿಸುವಂತೆ ಕಳಸ ಅರಣ್ಯ ಇಲಾಖೆಗೆ ಮನವಿಯನ್ನು ಸಲ್ಲಿಸಿದ್ದಾರೆ.