ಕಳಸ ತಾಲ್ಲೂಕಿನಾಧ್ಯಂತ ಸುರಿಯುತ್ತಿರುವ ಮಳೆಯ ಹಿನ್ನಲೆಯಲ್ಲಿ ಬೇಡಕ್ಕಿ ಹಳ್ಳ ತುಂಬಿ ಹರಿದ ಪರಿಣಾಮ ಕೋಣೆಬೈಲು ತಿಮ್ಮಯ್ಯನವರ ಗದ್ದೆ ಸಂಪೂರ್ಣ ಜಲಾವೃತವಾಯಿತು.
ಕಳೆದ ವಾರವಷ್ಟೆ ಈ ಗದ್ದೆಯಲ್ಲಿ ಸಸಿ ನೆಡಲಾಗಿತ್ತು.ಆದರೆ ಬುಧವಾರ ಸುರಿದ ಮಳೆಯಿಂದ ಹಳ್ಳದ ನೀರು ಗದ್ದೆ ಮೇಲೆ ಹರಿದು ನೆಟ್ಟ ಸಸಿಗಳು ಸಂಪೂರ್ಣ ನಾಶವಾದವು.
ಈ ಹಿಂದೆ ಇದೇ ಗದ್ದೆ ಮುಳುಗಿದ್ದ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ನೀರು ಗದ್ದೆಗೆ ಹರಿಯದಂತೆ ತಡೆ ಗೋಡೆ ನಿರ್ಮಿಸಿಕೊಡುವ ಮತ್ತು ಸೂಕ್ತ ಪರಿಹಾರ ನೀಡುವ ಬಗ್ಗೆ ಭರವಸೆ ನೀಡಿದ್ದರು.ಆದರೆ ವರ್ಷಗಳು ಮೂರು ಉರುಳಿತೇ ಹೊರತು ಪರಿಹಾರ ಯಾವುದೂ ಸಿಗಲಿಲ್ಲ.
ಒಂದು ವಾರಗಳ ಹಿಂದೆಯಷ್ಟೆ 25 ಸಾವಿರ ಖರ್ಚು ಮಾಡಿ ಗದ್ದೆ ಹದಗೊಳಿಸಿ ಮಾಡಿದ ಸಸಿ ನಾಟಿ ಈಗ ನೀರಿನಲ್ಲಿ ಹುಣಸೆ ಹಣ್ಣು ತೊಳೆದಂತಾಗಿದೆ.