ಕಳಸದ ಕೋಟೆಹೊಳೆಯಲ್ಲಿರುವ ಹಿಂದೂ ರುದ್ರಭೂಮಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 2 ಲಕ್ಷ ರೂಪಾಯಿ ಅನುದಾನ ನೀಡಲು ಮಂಜೂರಾತಿ ಸಿಕ್ಕಿದೆ.
ಕಳಸ ಹಿಂದೂ ರುದ್ರಭೂಮಿಯ ಅಭಿವೃದ್ಧಿಗಾಗಿ ರುದ್ರಭೂಮಿ ಸಮಿತಿಯು ಧರ್ಮಸ್ಥಳದ ಡಿ.ವೀರೇಂದ್ರ ಹೆಗ್ಗಡೆ ಮತ್ತು ಡಿ.ಹರ್ಷೇಂದ್ರ ಕುಮಾರ್ ಅವರಲ್ಲಿ ಅನುದಾನಕ್ಕಾಗಿ ಈ ಹಿಂದೆ ಮನವಿ ಮಾಡಿತ್ತು.
ಒಟ್ಟು 10 ಲಕ್ಷ ರೂ ವೆಚ್ಚದ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ಇದರಲ್ಲಿ 3.5 ಲಕ್ಷ ರೂಪಾಯಿ ವೆಚ್ಚದ ಈ ಯೋಜನೆಯಲ್ಲಿ ಶವ ದಹನ ಮಾಡುವ ಸಿಲಿಕಾನ್ ಚೇಂಬರ್,ಶೆಡ್ ಮತ್ತು ಕಟ್ಟಿಗೆ ದಾಸ್ತಾನು ಇಡುವ ಕೊಟ್ಟಿಗೆ ನಿರ್ಮಾಣ ಮಾಡಲಾಗುತ್ತಿದೆ. ಉಳಿದ ಮೊತ್ತವನ್ನು ಹಿಂದೂ ರುದ್ರಭೂಮಿ ಸಮಿತಿ ದಾನಿಗಳ ನೆರವಿನಿಂದ ಭರಿಸುತ್ತಿದೆ.
ಮಂಜೂರಾತಿ ಪತ್ರವನ್ನು ಯೋಜನೆಯ ಅಧಿಕಾರಿಗಳು ರುದ್ರಭೂಮಿ ಸಮಿತಿಯ ರುದ್ರಯ್ಯ ಆಚಾರ್, ಭರತ್ರಾಜ್, ಜಯಕುಮಾರ್ ಭಟ್, ಭಾಸ್ಕರ್ ಅವರಿಗೆ ಇತ್ತೀಚೆಗೆ ಹಸ್ತಾಂತರಿಸಿದರು. ಕಳಸ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಯಾ, ಶಿವರಾಜ್ ಮತ್ತಿತರರು ಇದ್ದರು.