ಕಳಸ-ಕುದುರೆಮುಖ ರಾಜ್ಯ ಹೆದ್ದಾರಿಯ ಶ್ರೀರಾಮ ಎಸ್ಟೇಟ್ ಸಮೀಪ ರಸ್ತೆಗೆ ಬಿದ್ದಿದ್ದ ಮರವನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಂಘಟನೆಯ ವಿದ್ಯಾರ್ಥಿಗಳು ತೆರವು ಗೊಳಿಸುವ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.
ಕಳೆದ ಹದಿನೈದು ದಿನಗಳ ಹಿಂದೆ ಅತಿಯಾದ ಗಾಳಿ ಮಳೆಗೆ ಈ ಮರ ಬಿದ್ದಿದ್ದು, ಅದರ ರೆಂಬೆ ಕೊಂಬೆಗಳು ರಸ್ತೆಗೆ ಚಾಚಿಕೊಂಡಿದ್ದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿತ್ತು. ಅಲ್ಲದೆ ಇದರಿಂದ ಹಲವಾರು ಬೈಕ್ ಸವಾರರು ಬಿದ್ದು ಪೆಟ್ಟು ಮಾಡಿಕೊಂಡಿದ್ದರು.
ಈ ಬಗ್ಗೆ ಆಗಸ್ಟ್ 20ರಂದು ಕಳಸ ಲೈವ್ ನಲ್ಲಿ ವರದಿ ಮಾಡಲಾಗಿತ್ತು. ಈ ಬಗ್ಗೆ ಎಚ್ಚೆತ್ತುಕೊಂಡ ವಿದ್ಯಾರ್ಥಿಗಳು ಮರವನ್ನು ತೆರವು ಮಾಡುವ ಮೂಲಕ ಸ್ಥಳೀಯರ ಮತ್ತು ವಾಹನ ಸವಾರರ ಪ್ರಶಂಸೆಗೆ ಒಳಗಾಗಿದ್ದಾರೆ.
ಈ ಬಗ್ಗೆ ವಿದ್ಯಾರ್ಥಿ ಸುಕೇಶ್ ಮಾತನಾಡಿ ರಸ್ತೆಯಲ್ಲಿ ಬಿದ್ದಿದ್ದ ಮರದ ಬಗ್ಗೆ ಕಳಸ ಲೈವ್ ವರದಿ ಮಾಡಿರುವುದನ್ನು ಗಮನಿಸಿ ಕಳೆದ ವಾರ ತೆರವು ಮಾಡಲು ತೀರ್ಮಾನಿಸಿದ್ದೇವಾದರೂ ಮಳೆ ಕಾರಣದಿಂದ ಸಾಧ್ಯವಾಗಿರಲಿಲ್ಲ. ಆದ್ದರಿಂದ ಬುಧವಾರ ನಮ್ಮ ಸಂಘಟನೆ ವತಿಯಿಂದ ತೆರವು ಮಾಡಿದ್ದೇವೆ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಂಘಟನೆಯ ವಿದ್ಯಾರ್ಥಿಗಳಾದ ಅನುಷ್, ಪ್ರತಾಪ್, ಚಂದನ್, ಕಾರ್ತಿಕ್ ಇದ್ದರು.