- ಮಲೆನಾಡಿಗರೆಂದರೆ ಪರ್ವತ ಶ್ರೇಣಿಗಳ ಹಚ್ಚ ಹಸಿರಿನ ಅಂಚಿನಲ್ಲಿ ತುಂಬು ಜೀವನ ನಡೆಸುವವರು, ಮೃದು ಸ್ವಭಾವಿಗಳೆಂಬ ಹೊಗಳಿಕೆಗೆ ಸೀಮಿತವಾಗಿದ್ದ ಕಾಲದಲ್ಲಿ ತನ್ನತನವ ಉಳಿಸಿಕೊಳ್ಳದ ವ್ಯಕ್ತಿತ್ವ, ದೇಶಕ್ಕಾಗಿ ಮಿಡಿಯದ ಮನಸ್ಸು ನಿಶ್ವರ ಎಂಬ ವಾಕ್ಯೋಕ್ತಿಯಂತೆ ತನ್ನ ೨೧ನೇ ವಯಸ್ಸಿನಲ್ಲಿಯೇ ಸ್ವಾತಂತ್ರ್ಯ ಭಾರತದ ಹೋರಾಟದ ಹಾದಿ ಹಿಡಿದ ಮಲೆನಾಡ ಹೃದಯ ಭಾಗ ಕಳಸ ಕಂಡ ಅಪರೂಪದ ದೇಶ ಭಕ್ತರ ಪರಿಚಯವಿದು.
೧೯೨೧ರಲ್ಲಿ ಶ್ರೀಯುತ ಗಣಪತಿ ಭಟ್ ರವರ ಐದು ಜನ ಮಕ್ಕಳಲ್ಲಿ ಎರಡನೇಯವರಾಗಿ ಅಗಸ್ತ್ಯ ಕ್ಷೇತ್ರ ಕಳಸದ ಕಲ್ಲುಗೋಡಿನಲ್ಲಿ ಜನಿಸಿದ ಮಹಾಬಲ ಭಟ್ ತನ್ನ ಸಣ್ಣ ವಯಸ್ಸಿಗೆ ಸ್ವಾತಂತ್ರ್ಯ ಹೋರಾಟಗಾರರೆನಿಸಿದರೆ ನಂತರ ವೈದ್ಯಕೀಯ ಕ್ಷೇತ್ರ ಪ್ರವೇಶಿಸಿ ಡಾ|| ಮಹಾಬಲ ಭಟ್ ರಾದರು. ಹೌದು ಮಲೆನಾಡಿನ ಕುಗ್ರಾಮದಲ್ಲಿ ಜನಿಸಿ ಮೈಸೂರಿನಲ್ಲಿ ತಮ್ಮ ಲೈಸನ್ಸ್ ಇನ್ ಆಯುರ್ವೇದಿಕ್ ಮೆಡಿಕಲ್ ಸೈನ್ಸ್ ವಿದ್ಯಾಭ್ಯಾಸ ಮುಗಿಸಿ ಕಳಸದಲ್ಲಿ ‘ನೇತಾಜಿ ಫಾರ್ಮಸಿ’ ಎಂಬ ಆಸ್ಪತ್ರೆಯನ್ನು ತೆರೆಯುವ ಮೂಲಕ ಕಳಸ ಕಂಡ ಮೊದಲ ಡಾಕ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗುವುದಲ್ಲದೇ ಮಲೆನಾಡಿನ ದರ್ಗಮ ಪ್ರದೇಶಗಳಿಗೆ ಸ್ವತಃ ಕಾಲ್ನಡಿಗೆಯಲ್ಲಿಯೇ ತೆರಳಿ ಅದೆಷ್ಟೋ ಮಹಿಳೆಯರಿಗೆ ಹರಿಗೆ ಮಾಡಿಸುವ ಮೂಲಕ ಪುನರ್ಜನ್ಮ ನೀಡಿರುವುದನ್ನು ಹಳ್ಳಿಗಾಡಿನ ಜನ ಇಂದಿಗೂ ನೆನೆಯುತ್ತಾರೆ.
ಹಾಗೆಯೇ ೧೯೪೨ರ ಕ್ವಿಟ್ ಇಂಡಿಯಾ (ಭಾರತ ಬಿಟ್ಟು ತೊಲಗಿ) ಚಳುವಳಿಯಲ್ಲಿ ಭಾಗವಹಿಸಿ ಬ್ರಿಟೀಷರ ಕೆಂಗಣ್ಣಿಗೆ
ಗುರಿಯಾದದ್ದಲ್ಲದೆ, ಸುಮಾರು ಒಂಬತ್ತು ತಿಂಗಳ ಕಾಲ ಕಠಿಣ ಶಿಕ್ಷೆಯೊಂದಿಗೆ ಬ್ರಿಟೀಷ್ ಸರ್ಕಾರ ವಿಧಿಸಿದ ದಂಡವನ್ನು ಬರಿಸಲಾಗದೆ ಮತ್ತೆಡರಡು ತಿಂಗಳ ಕಾಲ ಕಠಿಣ ಶಿಕ್ಷೆಯನ್ನು ಅನುಭವಿಸಿ ಮಲೆನಾಡ ಮಣ್ಣಿಗೆ ಮರಳಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಧೀಮಂತರೆನಿಸಿದರು. ನಂತರದ ದಿನಗಳಲ್ಲಿ ದಕ್ಷಿಣಕಾಶಿ ಶ್ರೀ ಕಲಶೇಶ್ವರ ಸ್ವಾಮಿ ದೇವಸ್ಥಾನದ ಆಡಳಿತ ನಿರ್ವಹಕರಾಗಿ ಹಾಗೂ ಆಗಿನ ಕಳಸ ಮಂಡಲ ಪಂಚಾಯಿತಿಯ ಛೇರ್ ಮನ್ ಆಗಿ ಅದೆಷ್ಟೋ ಜನರ ಕನಸಾಗಿದ್ದ ರಸ್ತೆ ಹಾಗೂ ಕುಡಿಯುವ ನೀರಿನ ಸೌಕರ್ಯವನ್ನು ಕಲ್ಪಿಸಿಕೊಡುವ ಮೂಲಕ ಉತ್ತಮ ಆಡಳಿತಗಾರ ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ. ಸ್ವಾತಂತ್ರ್ಯ ಭಾರತದ ಹೋರಾಟದ ಫಲವಾಗಿ ೧೫-೦೮-೧೯೮೩ರಲ್ಲಿ ಚಿಕ್ಕಮಗಳೂರಿನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ
ಅಂದಿನ ಪ್ರಧಾನಮಂತ್ರಿ ಶ್ರೀಮತಿ ಇಂದಿರಾಗಾಂಧಿಯವರಿಂದ ಸ್ವಾತಂತ್ರ್ಯ ಹೋರಾಟಗಾರರೆಂದು ತಾಮ್ರ ಪತ್ರವನ್ನು ಪಡೆದಿರುತ್ತಾರೆ. ತಮ್ಮ ೮೯ನ ವಯಸ್ಸಿನಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದರೂ ಸಹ ಕಳಸದ ವಿವಿಧ ಶಾಲಾ ಮಕ್ಕಳು ಮುಖ್ಯರಸ್ತೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಮೆರವಣಿಗೆ ಹೋಗುವಾಗ ತಾನೂ ಸಹ ಆ ಇಳಿ ವಯಸ್ಸಿನಲ್ಲಿ ಮನೆಯ ಮುಂದೆ ನಿಂತು ಗೌರವ ಸೂಚಿಸುತ್ತಿದ್ದುದು ಇಂದಿಗೂ ನಮಗೆ ಮಾದರಿ ಎನ್ನುತ್ತಾರೆ ಅವರ ಮೊಮ್ಮಗ ಗಣಪತಿ ಭಟ್.
ಶ್ರೀಯುತರಿಗೆ ೨೦೧೧ರವರೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಪಿಂಚಣಿ ಬರುತ್ತಿದ್ದು, ೯೦ವರ್ಷಗಳ ತುಂಬು ಜೀವನ ನಡೆಸಿ ೨೦೧೧ ರಲ್ಲಿ ಇಹಲೋಕವನ್ನು ತ್ಯಜಿಸಿದರು. ಅವರ ಅಂತಿಮ ಕಾರ್ಯದಲ್ಲಿ ಕಳಸ ಪೊಲೀಸ್ ಅಧಿಕಾರಿಗಳು ಭಾಗವಹಿಸಿ ರಾಷ್ಟ್ರಧ್ವಜದೊಂದಿಗೆ ಗೌರವ ಸೂಚಿಸಿದ ಕ್ಷಣವನ್ನು ನೆನೆಯುವಾಗ ಇವರ ಮಗನಾದ ನಾಗರಾಜ್ ಭಟ್ ರವರ ಕಣ್ಣಾಲಿಗಳು ಒದ್ದೆಯಾದವು, ಪ್ರಸ್ತುತ ಕಳಸ ತಾಲೂಕು ಆಡಳಿತ ೧೫-೦೮-೨೦೨೨ ರಂದು ಆಚರಿಸುತ್ತಿರುವ ೭೫ನೇ ಸ್ವತಂತ್ರ್ಯ ಭಾರತದ ಅಮೃತ ಮಹೋತ್ಸವದಲ್ಲಿ ಭಾಗವಹಿಸುವಂತೆ ಇವರ ಕುಟುಂಬದವರಿಗೆ ವಿಶೇಷ ಆಹ್ವಾನ ನೀಡಿರುವುದು ದೇಶ ಸೇವೆಗೆ ನೀಡಿದ ಮಹತ್ವವಾದರೆ ಅಂತಹವರ ಅಪರೂಪದ ಪರಿಚಯ ನನ್ನಲ್ಲಿ ಹೊಸ ದಿಗಂತವನ್ನು ಹುಟ್ಟು ಹಾಕಿದೆ.
ಬರಹ:ಹೆಚ್.ಆರ್.ಪ್ರಶಾಂತ್