ಕರ್ನಾಟಕದ ಪದವಿ ಕಾಲೇಜುಗಳಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕಳೆದ ಸಾಲಿನಿಂದ ಜಾರಿಗೆ ತರಲಾಗಿದೆ.
ಹೊಸ ನೀತಿಯನ್ವಯ ಪದವಿ ವ್ಯಾಸಂಗದಲ್ಲಿ ಹೆಚ್ಚಿನ ಆಯ್ಕೆಗಳು ಲಭ್ಯವಾಗಿದ್ದು, ವಿದ್ಯಾರ್ಥಿ ಸ್ನೇಹಿಯಾಗಿದೆ.ಪದವಿ ದಾಖಲಾತಿಯನ್ನು ಬಯಸುತ್ತಿರುವ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಹಲವು ಗೊಂದಲಗಳಿದ್ದು ಇದನ್ನು ಬಗೆಹರಿಸುವ ಪ್ರಯತ್ನ ಇಲ್ಲಿ ಮಾಡಲಾಗಿದೆ.
ಹೊಸ ಶಿಕ್ಷಣ ನೀತಿಯ ಬಗ್ಗೆ ಇರುವ ಮೊದಲ ಗೊಂದಲವೆಂದರೆ ಪದವಿ ವ್ಯಾಸಂಗ ಈಗ ನಾಲ್ಕು ವರ್ಷಗಳಿಗೆ ಏರಿಕೆಯಾಗಿದೆ ಎನ್ನುವುದು. ಆದರೆ, ಪದವಿ ವ್ಯಾಸಂಗ ಅವಧಿಯು ರಾಜ್ಯದ ಎಲ್ಲಾ ಕಾಲೇಜುಗಳಲ್ಲಿಯೂ ಈ ಹಿಂದಿನಂತೆಯೇ ಮೂರು ವರ್ಷಗಳೇ ಆಗಿದೆ. ಇದು ಬಿ.ಎ, ಬಿ.ಕಾಂ ಮತ್ತು ಬಿ.ಎಸ್ಸಿ ಸೇರಿದಂತೆ ಎಲ್ಲಾ ಕೋರ್ಸ್ ಗಳಿಗೂ ಇದು ಅನ್ವಯ. ಮೂರು ವರ್ಷಗಳ ವ್ಯಾಸಂಗ ಪೂರ್ಣಗೊಂಡ ನಂತರ ವಿಶ್ವವಿದ್ಯಾಲಯದಿಂದ ಮೊದಲಿನಂತೆಯೇ ಪದವಿ ಪ್ರಮಾಣ ಪತ್ರ ದೊರಕಲಿದೆ. ನಂತರ ಉನ್ನತ ವ್ಯಾಸಂಗ ಅಥವಾ ಉದ್ಯೋಗವನ್ನು ತಮ್ಮ ಇಚ್ಛೆಯಂತೆ ಮಾಡಿಕೊಳ್ಳಬಹುದು.
ಬಿ.ಕಾಂ ಪದವಿಯಲ್ಲಿ ವಿಶ್ವವಿದ್ಯಾಲಯದ ಕಡ್ಡಾಯ ವಿಷಯಗಳು ಲಭ್ಯವಿದ್ದು, ಬಿ.ಎ ಪದವಿಯಲ್ಲಿ ಕಾಲೇಜಿನಲ್ಲಿ ಲಭ್ಯವಿರುವ ಕೋರ್ಸುಗಳಲ್ಲಿ ಎರಡನ್ನೂ ಮಾತ್ರ ವ್ಯಾಸಂಗಕ್ಕೆ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. (ಹಿಂದೆ ಮೂರು ವಿಷಯಗಳನ್ನು ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕಿತ್ತು) ತಮ್ಮ ಆಯ್ಕೆಯ ನಿಕಾಯದ ಎರಡು ವಿಷಯಗಳೊಂದಿಗೆ ಬೇರೆ ನಿಕಾಯದ ಒಂದು ವಿಷಯದ ಅಧ್ಯಯನಕ್ಕೆ ಹೊಸ ನೀತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಉದಾಹರಣೆಗೆ ಬಿ.ಎ ಯಲ್ಲಿ ಇತಿಹಾಸ ಮತ್ತು ಅರ್ಥಶಾಸ್ತ್ರ ವಿಷಯಗಳನ್ನು ಮುಖ್ಯ ವಿಷಯಗಳಾಗಿ ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳು ವಾಣಿಜ್ಯ ಶಾಸ್ತ್ರ ನಿಕಾಯದ ‘ಹಣಕಾಸು ಸಾಕ್ಷರತೆ’ ಪಠ್ಯವನ್ನು ಮುಕ್ತ ಆಯ್ಕೆ ವಿಷಯವಾಗಿ ವ್ಯಾಸಂಗ ಮಾಡಲು ಅವಕಾಶವಿದೆ. ಇಲ್ಲಿ ಪ್ರತಿ ಸೆಮಿಸ್ಟರ್ ನಲ್ಲಿ ಮುಕ್ತ ಆಯ್ಕೆಯ ಅಧ್ಯಯನ ವಿಷಯವನ್ನು ಬದಲಿಸಿಕೊಳ್ಳುಲು ವಿದ್ಯಾರ್ಥಿಗಳಿಗೆ ಅವಕಾಶವಿದೆ. ಮೇಲೆ ತಿಳಿಸಿದಂತೆ ಬಿ.ಕಾಂ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಲಭ್ಯವಿರುವ ಕಲಾ ವಿಭಾಗದ ಮಾನವ ಹಕ್ಕುಗಳು, ಪತ್ರಿಕೋದ್ಯಮ, ಕರ್ನಾಟಕದ ಸಾಂಸ್ಕೃತಿಕ ಇತಿಹಾಸ ವಿಷಯಗಳನ್ನು ಮುಕ್ತ ಆಯ್ಕೆಯ ವಿಷಯವಾಗಿ ಅಧ್ಯಯನ ಮಾಡಬಹುದಾಗಿದೆ.
ಹೊಸ ಶಿಕ್ಷಣ ನೀತಿಯಲ್ಲಿ ಪಠ್ಯ ವಿಷಯದಷ್ಟೇ ಪ್ರಾಮುಖ್ಯತೆಯನ್ನು ಪಠ್ಯೇತರ ಚಟುವಟಿಕೆಗಳಿಗೂ ನೀಡಲಾಗಿದೆ. ವಿದ್ಯಾರ್ಥಿಗಳ ಮಾನಸಿಕ ಮತ್ತು ದೈಹಿಕ ಆರೋಗ್ಯದ ಹಿತಕ್ಕಾಗಿ ಯೋಗವನ್ನು ಪಠ್ಯದಲ್ಲಿ ಸೇರ್ಪಡೆ ಮಾಡಲಾಗಿದೆ. ಕ್ರೀಡಾ ಚಟುವಟಿಕೆಗಳಿಗೆ ವಾರದಲ್ಲಿ ಇಂತಿಷ್ಟು ಸಮಯವನ್ನು ಮೀಸಲಿಡಲಾಗಿದೆ. ಎನ್.ಎಸ್.ಎಸ್, ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ವಿದ್ಯಾರ್ಥಿಗಳೆಲ್ಲರೂ ತಮ್ಮ ಆಯ್ಕೆಯನುಸಾರ ಭಾಗವಹಿಸುವುದು ಕಡ್ಡಾಯಗೊಳಿಸಲಾಗಿದ್ದು, ಈ ಎಲ್ಲಾ ಪಠ್ಯೇತರ ಚಟುವಟಿಕೆಗಳಿಗೆ ಅಂಕಗಳನ್ನು ನಿಗದಿಪಡಿಸಲಾಗಿದೆ.
ಹಿಂದೆ ಪದವಿ ವ್ಯಾಸಂಗ ನಿರ್ದಿಷ್ಟ ಕೋರ್ಸಿನ ವಿಷಯಗಳಿಗೆ ಮಾತ್ರ ಸೀಮಿತವಾಗಿತ್ತು, ಆದರೆ ಹೊಸ ನೀತಿಯಲ್ಲಿ ವಿದ್ಯಾರ್ಥಿಗಳು ತಮ್ಮ ಆಯ್ಕೆಯ ವಿಷಯಗಳೊಂದಿಗೆ ಪ್ರಸ್ತುತ ಆಧುನಿಕ ಯುಗಕ್ಕೆ ಅಗತ್ಯವಾಗಿ ಬೇಕಿರುವ ಕಂಪ್ಯೂಟರ್ ಜ್ಞಾನ, ಡಿಜಿಟಲ್ ಫ್ಲೂಯೆನ್ಸಿ, ಸೈಬರ್ ಭದ್ರತೆ ಮುಂತಾದ ಕೌಶಲ್ಯ ಆಧಾರಿತ ಕೋರ್ಸುಗಳನ್ನು ಅಧ್ಯಯನದಲ್ಲಿ ಸೇರ್ಪಡೆ ಗೊಳಿಸಲಾಗಿದೆ.
ಎಲ್ಲಾ ಪದವಿ ಕೋರ್ಸುಗಳಲ್ಲಿ ಪರಿಸರ ಅಧ್ಯಯನ ಮತ್ತು ಭಾರತ ಸಂವಿಧಾನ ಅಧ್ಯಯನವನ್ನು ಈ ಹಿಂದಿನಂತೆಯೇ ಮುಂದುವರೆಸಲಾಗಿದೆ.ವಿದ್ಯಾರ್ಥಿಗಳನ್ನು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತಮ ರೀತಿಯಲ್ಲಿ ತೊಡಗುವಂತೆ ಮಾಡಿ ಅವರನ್ನು ಪರಿಪೂರ್ಣ ವ್ಯಕ್ತಿಗಳನ್ನಾಗಿ ರೂಪಿಸುವುದು ಹೊಸ ಶಿಕ್ಷಣ ನೀತಿಯ ಉದ್ದೇಶವಾಗಿದೆ.
ಪದವಿ ವ್ಯಾಸಂಗದಲ್ಲಿ ದೀರ್ಘಾವಧಿಯಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಅವಕಾಶವಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಯೋಜನವನ್ನು ಪಡೆದುಕೊಳ್ಳಲು ವಿದ್ಯಾರ್ಥಿಗಳು ಮತ್ತು ಪೋಷಕರು ಪದವಿ ವ್ಯಾಸಂಗಕ್ಕೆ ಆದ್ಯತೆಯನ್ನು ನೀಡಬೇಕು.
ಕಳಸದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಲವು ವರ್ಷಗಳಿಂದ ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿಕೊಂಡು ಬಂದಿದ್ದು ಕಳೆದ ಸಾಲಿನಲ್ಲಿ ಶೇ. 93 ರಷ್ಟು ಫಲಿತಾಂಶ ಮತ್ತು ಒಂದು ರಾಂಕ್ ಪಡೆದಿದೆ. ಕಾಲೇಜಿನಲ್ಲಿ ಬಿ.ಎ ಮತ್ತು ಬಿ.ಕಾಂ ಕೋರ್ಸ್ ಗಳು ವ್ಯಾಸಂಗಕ್ಕೆ ಲಭ್ಯವಿದ್ದು, ಬಿ.ಎ ಪದವಿಯಲ್ಲಿ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಐಚ್ಛಿಕ ಕನ್ನಡ ಮತ್ತು ಪತ್ರಿಕೋದ್ಯಮ ವಿಷಯಗಳು ಆಯ್ಕೆಗೆ ಲಭ್ಯವಿದೆ.
ಕಾಲೇಜಿನ ಪ್ರಮುಖ ವೈಶಿಷ್ಟ್ಯಗಳು:
ಉತ್ತಮ ಶೈಕ್ಷಣಿಕ ಸೌಲಭ್ಯ ಮತ್ತು ಕಡಿಮೆ ವೆಚ್ಚದ ಪದವಿ ಶಿಕ್ಷಣ ಲಭ್ಯ.
ವಿದ್ಯಾರ್ಥಿಗಳ ಪ್ರತಿಭೆಗೆ ಗರಿಷ್ಠ ಮಟ್ಟದ ಪ್ರೋತ್ಸಾಹ ನೀಡುವ ಅಧ್ಯಾಪಕ ವರ್ಗ,
ಸುಂದರ, ಶಾಂತ, ವಿಶಾಲವಾದ ಮತ್ತು ರಾಂಗಿಗ್ ಮುಕ್ತ ಕ್ಯಾಂಪಸ್,
ಕಾಲೇಜಿನ ಸರ್ವತೋಮುಖ ಅಭಿವೃದ್ಧಿಗೆ ಕಂಕಣ ಬದ್ಧವಾಗಿ ಶ್ರಮಿಸುತ್ತಿರುವ ಕಾಲೇಜು ಅಭಿವೃದ್ಧಿ ಸಮಿತಿ,
ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಪಠ್ಯಕ್ರಮವನ್ನು ಅತ್ಯುತ್ತಮ ರೀತಿಯಲ್ಲಿ ಜಾರಿಗೆ ತಂದಿರುವ ಹೆಗ್ಗಳಿಕೆ,
ವಿದ್ಯಾರ್ಥಿಗಳ ಶೈಕ್ಷಣಿಕ ಮುತುವರ್ಜಿ ವಹಿಸುತ್ತಿರುವ ಪೋಷಕರ ಮತ್ತು ಅಧ್ಯಾಪಕರ ವೇದಿಕೆ,
ಕಾಲೇಜಿನ ಬಹುತೇಕ ತರಗತಿಗಳಲ್ಲಿ ಸ್ಮಾರ್ಟ್ ಕ್ಲಾಸ್ ಅಳವಡಿಕೆ,
ವಿದ್ಯಾರ್ಥಿಗಳ ಸುರಕ್ಷತೆಗಾಗಿ ಸಂಪೂರ್ಣ ಕ್ಯಾಂಪಸ್, ತರಗತಿ ಮತ್ತು ಆವರಣದಲ್ಲಿ ಸಿ.ಸಿ.ಟಿ.ವಿ ಕಣ್ಗಾವಲು,
ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ದೇವಾಲಯದಿಂದ ಪ್ರತಿದಿನ ಭೋಜನದ ವ್ಯವಸ್ಥೆ,
ಎಲ್ಲಾ ವರ್ಗದ ವಿದ್ಯಾರ್ಥಿನಿರಿಗೆ ಸರ್ಕಾರಿ ಹಾಸ್ಟೆಲ್ ಸೌಲಭ್ಯ,
ಅತ್ಯಾಧುನಿಕ ಕಂಪ್ಯೂಟರ್ ಲ್ಯಾಬ್, ನುರಿತ ಶಿಕ್ಷಕರಿಂದ ಉಚಿತ ಕಂಪ್ಯೂಟರ್ ಶಿಕ್ಷಣ,
ವಿದ್ಯಾರ್ಥಿಗಳ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕಾಗಿ ಯೋಗ ಗುರು ಶ್ರೀ ಪ್ರೇಮ್ ಕುಮಾರ್ ರವರಿಂದ ಪ್ರತಿ ದಿನ ಉಚಿತ ಯೋಗ ತರಗತಿ,
ಉಚಿತ ಮಲ್ಟಿ ಜಿಮ್ ಸೌಲಭ್ಯ,
8000 ಕ್ಕೂ ಹೆಚ್ಚು ಪುಸ್ತಕಗಳುಳ್ಳ ಗ್ರಂಥಾಲಯ.
ವಿವಿಧ ವಿದ್ಯಾರ್ಥಿ ವೇತನ ಸೌಲಭ್ಯಗಳು.
ಇತ್ಯಾದಿ..
ಕಡಿಮೆ ವೆಚ್ಚದ ಗುಣಮಟ್ಟದ ಪದವಿ ಶಿಕ್ಷಣ ಪಡೆಯಲು ಕಳಸದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿ ಮತ್ತು ಪೋಷಕರ ಮೊದಲ ಆದ್ಯತೆಯಾಗಲಿ.
ಮಾಹಿತಿ
ವಿನಯ ಕುಮಾರ್ ಶೆಟ್ಟಿ, ಪ್ರಾಂಶುಪಾಲರು
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಳಸ