ಹೊರನಾಡು ಗ್ರಾಮದ ದೊಡ್ಮನೆ ರಾಜೇಂದ್ರ ಪ್ರಸಾದ್ ಹೆಗ್ಗಡೆ ಇವರ ಐತಿಹಾಸಿಕ ಹಿನ್ನಲೆ ಇರುವ ಗದ್ದೆಯಲ್ಲಿ ಹಿಂದಿನ ಸಾಂಪ್ರದಾಯದಂತೆ ಗದ್ದೆ ನಾಟಿ ಮಾಡುವ ದೃಶ್ಯ ಕಂಡು ಬಂತು.
ಭಾನುವಾರ ಈ ಗದ್ದೆಯಲ್ಲಿ ಕೃಷಿಕರಿಗೆ ಹಬ್ಬದ ಸಂಬ್ರಮದ ವಾತಾವರಣ ನಿರ್ಮಾಣವಾಗಿತ್ತು.ತಂಡೋಪ ತಂಡವಾಗಿ ಬಂದ ಕೃಷಿಕರು ಗದ್ದೆಗಿಳಿದು ನಾಟಿ ಮಾಡುವುದನ್ನು ನೋಡುವುದೇ ಅತ್ಯಂತ ಮನೋಹರವಾಗಿತ್ತು.ಒಂದೆಡೆ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಗದ್ದೆಗಿಳಿದು ನಾಟಿ ಮಾಡಿ ಗಮನ ಸೆಳೆದರೆ, ಇನ್ನೊಂದು ಕಡೆ ಕಡೆ ಹೆಂಗಸರ ಮಾತುಗಾರಿಕೆ,ಮತ್ತೊಂದು ಕಡೆ ಹಾಡು,ಕಥೆಗಳನ್ನು ಹೇಳುತ್ತಾ ಗದ್ದೆ ನಾಟಿ ಮಾಡುವುದು ಕಂಡು ಬಂದರೆ, ಪುರುಷರ ಮಾತು,ಹರಟೆಯ ಮಧ್ಯೆ ಮಕ್ಕಳು ಕೆಸರಿನಲ್ಲಿ ಎದ್ದು ಬಿದ್ದು ಆಟವಾಡುತ್ತಿರುವ ನಡುವೆಯೂ ಗದ್ದೆಯ ಮಾಲಿಕ ರಾಜೇಂದ್ರ ಪ್ರಸಾದ್ ಹೆಗ್ಗಡೆ ಬಂದಿರುವ ಪ್ರತಿಯೊಬ್ಬರನ್ನು ಮಾತನಾಡಿಸುತ್ತಾ,ಕ್ಷೇಮ ಸಮಚಾರ ವಿಚಾರಿಸುತ್ತಿರುವುದು ಕಂಡು ಬಂತು.ಸುತ್ತ ಮುತ್ತಲ ನೂರಾರು ಗ್ರಾಮಸ್ಥರು ಈ ಅಪರೂಪದ ದೃಶ್ಯವನ್ನು ಕಣ್ತುಂಬಿಸಿಕೊಳ್ಳಲೆಂದೆ ಬಂದು ಕೃಷಿ ಕಾರ್ಯದ ಸಂಭ್ರಮದಲ್ಲಿ ಪಾಲ್ಗೊಂಡರು.
ಈ ಮದ್ಯೆ ಜೈಪುರ ಕಡೆಯ ಹಿರಿಯರೊಬ್ಬರನ್ನು ಮಾತನಾಡಿಸಿದಾಗ ನಾನು ಅನಾದಿಕಾಲದಿಂದಲೂ ಇಲ್ಲಿಯ ಗದ್ದೆ ನಾಟಿಗೆ ಬಂದು ನಮ್ಮ ಸೇವೆಯನ್ನು ಮಾಡಿ ಹೋಗುತ್ತಿದ್ದೇನೆ.ಹಿಂದೆ ನಾನು ಗದ್ದೆ ನಾಟಿ ಮಾಡುತ್ತಿದ್ದೆ ಆದರೆ ಈಗ ವಯಸ್ಸಾಗಿದೆ ಗದ್ದೆಗೆ ಇಳಿಯಲು ಆಗುತ್ತಿಲ್ಲ.ಆದರೂ ಎರಡು ಸಸಿ ನೆಟ್ಟು ಹೋಗೋಣ ಅಂತ ಬಂದಿದ್ದೇನೆ.ಇಲ್ಲಿಗೆ ಬಂದು ಗದ್ದೆ ಸಸಿ ನೆಡುವುದೇ ನಮ್ಮ ಪಾಲಿನ ಪುಣ್ಯ ಅನ್ನುತ್ತಾರೆ.
ಮಾತಿನ ಮಧ್ಯೆ ಮಹಿಳೆಯೊಬ್ಬರು ಬಂದು ನಾವು ಬಸರೀಕಟ್ಟೆಯಿಂದ ಬಂದಿದ್ದೇವೆ.ಸುಮಾರು 15 ವರ್ಷಗಳಿಂದ ಬಂದು ನಮ್ಮ ಸೇವೆ ಮಾಡಿ ಹೋಗುತ್ತಿದ್ದೇವೆ.ಈ ಬಾರಿ ನಮ್ಮ ಕುಟುಂಬ ಸಹಿತ ಬಂದಿದ್ದೇವೆ ಅನ್ನುತ್ತಾರೆ.
ಬಂದಂತ ಎಲ್ಲಾ ಕೃಷಿಕರು ದೊಡ್ಮಣೆಯಲ್ಲಿ ಪ್ರಸಾದ,ಊಟೋಪಚಾರಗಳನ್ನು ನೀಡಿ ಕಳುಹಿಸಿ ಕೊಡಲಾಯಿತು.
ಯಾಂತ್ರೀಕೃತ ಕೃಷಿ,ತೋಟಗಾರಿಕಾ ಬೆಳೆಗಳ ಮಧ್ಯೆ ಗದ್ದೆ ಕೃಷಿಯನ್ನು ಕೈಬಿಡುತ್ತಿರುವ ಸನ್ನಿವೇಶ,ಗದ್ದೆ ಕೃಷಿ ಮಾಡಲು ಜನರೇ ಸಿಗದೆ ಇರುವ ಇಂದಿನ ಪರಿಸ್ಥಿತಿ ಇರುವಾಗ ದೊಡ್ಮನೆ ಗದ್ದೆ ಸಸಿ ನೆಡಲು ಸ್ವಯಂ ಪ್ರೇರಿತವಾಗಿ ತಂಡೋಪ ತಂಡವಾಗಿ ನೂರಾರು ಜನರು ಬಂದು ತಮ್ಮ ಸೇವೆ ಮಾಡಿ ಹೋಗುತ್ತಿದ್ದಾರೆ ಎಂದರೆ ಇಲ್ಲಿ ಏನಾದರೂ ಶಕ್ತಿ ಅಡಗಿರಬಹುದು ಎಂದು ಅನ್ನಿಸದೆ ಇರಲಾರದು.