ಕಳಸ: 75ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ವಾತಂತ್ರ್ಯ ಓಟ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಕಾಲೇಜಿನಿಂದ ಪ್ರಾರಂಭವಾದ ಓಟ ಸ್ಪರ್ಧೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ಮಹಾವೀರ ಸರ್ಕಲ್, ಅರಮನೆ ಮಕ್ಕಿ ರಸ್ತೆ, ಮಹಾವೀರ ಭವನ, ಕೋಟೆ ಹೊಳೆವರೆಗೂ ಸಾಗಿ ಪುನಃ ಅದೇ ಮಾರ್ಗದಲ್ಲಿ ಹಿಂದಿರುಗಿ ರುದ್ರ ಪಾದ ರಸ್ತೆ, ವೆಂಕಟ ರಮಣ ದೇವಸ್ಥಾನದ ಬಳಿ ಮುಖ್ಯ ರಸ್ತೆಯನ್ನು ತಲುಪಿ ಕಾಲೇಜು ಮುಂಭಾಗದವರೆಗೆ ಒಟ್ಟು ಐದು ಕಿಲೋಮೀಟರ್ ಪುರುಷರಿಗೆ ಹಾಗೂ ಮೂರು ಕಿಲೋಮೀಟರ್ ಮಹಿಳೆಯರಿಗೆ ನಿಗದಿಪಡಿಸಲಾಗಿತ್ತು.
ಪುರುಷರ ವಿಭಾಗದಲ್ಲಿ ಅಂತಿಮ ಬಿ.ಎ ವಿದ್ಯಾರ್ಥಿ ಚರಣ್ ಪ್ರಥಮ ಸ್ಥಾನ, ದ್ವಿತೀಯ ಬಿ.ಎ ಅರುಣ್ ದ್ವಿತೀಯ ಸ್ಥಾನ ಹಾಗೂ ಪ್ರಥಮ ಬಿ.ಕಾಂ ಸುಹಾನ್ ತೃತೀಯ ಸ್ಥಾನ ಪಡೆದರು.
ಮಹಿಳೆಯರ ವಿಭಾಗದಲ್ಲಿ ಅಂತಿಮ ಬಿ.ಎ ವಿದ್ಯಾರ್ಥಿನಿ ವರ್ಷಾ ಪ್ರಥಮ ಸ್ಥಾನ, ಪ್ರಥಮ ಬಿ.ಎ ಸೋನಿಯಾ ದ್ವಿತೀಯ ಸ್ಥಾನ ಹಾಗೂ ದ್ವಿತೀಯ ಬಿ.ಎ ಉಮಾ ತೃತೀಯ ಸ್ಥಾನ ಪಡೆದರು.