ಕಳಸ ತಾಲ್ಲೂಕಿನ ಕಲ್ಲುಗೋಡು ಎಂಬಲ್ಲಿ ಸೇತುವೆಗೆ ಹೊಂದಿಕೊಂಡು ನಿರ್ಮಿಸಿದ ತಡೆಗೋಡೆಯೊಂದು ಕುಸಿದು ಬಿದ್ದಿದೆ.
ಇದರೊಂದಿಗೆ ಒಂದು ತಿಂಗಳ ಅವಧಿಯಲ್ಲಿ ಕಳಸ ತಾಲ್ಲೂಕಿನಲ್ಲಿ ಮೂರು ತಡೆಗೋಡೆಗಳು ಮಣ್ಣುಪಾಲಾಗಿದೆ.
ಕಳೆದ ಒಂದು ತಿಂಗಳಿನ ಹಿಂದೆಯಷ್ಟೆ ಇಲ್ಲಿ 40 ಲಕ್ಷ ವೆಚ್ಚದಲ್ಲಿ ಸೇತುವೆಯನ್ನು ನಿರ್ಮಾಣ ಮಾಡಲಾಗಿದ್ದು ಇದರ ಎರಡೂ ಬದಿಯೂ ತಡೆಗೋಡೆ ನಿರ್ಮಿಸಲಾಗಿತ್ತು.ಇದರ ಒಂದು ಭಾಗದ ತಡೆಗೋಡೆ ಶುಕ್ರವಾರ ನೆಲಕ್ಕಚ್ಚಿದ್ದು, ಇನ್ನೊಂದು ಭಾಗದ ತಡೆಗೋಡೆಯೂ ಬಿರುಕು ಬಿಟ್ಟು ಕುಸಿದು ಬೀಳುವ ಸ್ಥಿತಿಯಲ್ಲಿದೆ.
ಪರಿಣಾಮ ಈ ರಸ್ತೆ ಕಡಿತ ಗೊಳ್ಳುವ ಸಾಧ್ಯತೆ ಎದುರಾಗಿದ್ದು, ಸಧ್ಯ ಬೈಕ್ ಮಾತ್ರ ಹೋಗುವ ಸ್ಥಿತಿಯಲ್ಲಿದೆ.ಇದರಿಂದ ಈ ಗ್ರಾಮದ 50ಕ್ಕೂ ಹೆಚ್ಚು ಕುಟುಂಬಗಳ ಸಂಪರ್ಕ ರಸ್ತೆ ಕಡಿತವಾಗುವ ಭೀತಿ ಎದುರಾಗಿದೆ.
ಈ ಬಗ್ಗೆ ಕಳಸ ಲೈವ್ ಜೊತೆ ಮಾತನಾಡಿದ ಲೋಕೋಪಯೋಗಿ ಇಲಾಖಾ ಇಂಜಿನೀಯರ್ ಕಾಮಗಾರಿ ಮಾಡಿದ ಗುತ್ತಿಗೆದಾರನಿಗೆ ಬಿಲ್ ನೀಡಲಿಲ್ಲ.ಎರಡೂ ಬದಿ ತಡೆಗೋಡೆ ಮರು ನಿರ್ಮಾಣ ಮಾಡಿಕೊಡುವವರೆ ಬಿಲ್ ನೀಡುವುದಿಲ್ಲ ಎಂದು ಹೇಳಿದ್ದಾರೆ.